ರಾಜ್ಯದಲ್ಲಿ ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹುದ್ದೆಗಳು ಖಾಲಿಯಿದ್ದು, ಈ ವರ್ಷ ಸುಮಾರು ೫೦೦೦ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನ ಸಭೆಯಲ್ಲಿ, ಪ್ರಶ್ನೋತ್ತರ ವೇಳೆಯಲ್ಲಿ, ಬಿಜೆಪಿ ಶಾಸಕ ಶ್ರಿ ಪ್ರೀತಂ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಶಾಂತಿ ಸೌಹಾರ್ದ ಕಾಪಾಡುವ ಹೊಣೆ ಹೊತ್ತಿರುವ ಇಲಾಖೆಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆದ್ಯತೆ ಮೇಲೆ ಕ್ರಮ ವಹಿಸಲಾಗಿದೆ, ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳ ಹಿಂದೆ ಇಲಾಖೆಯಲ್ಲಿ ಒಟ್ಟು ೨೨೦೦೦ ಹುದ್ದೆಗಳು ಖಾಲಿಯಿದ್ದು, ನೇಮಕಾತಿ ನಂತರ ಖಾಲಿ ಹುದ್ದೆಗಳ ಸಂಖ್ಯೆ ಪ್ರಸ್ತುತ ೯೦೦೦ ಇದೆ.
ಈ ವರ್ಷ, ಸುಮಾರು ೩೫೦೦ ಸಶಸ್ತ್ರ ಪೊಲೀಸರ, ಹೊಸ ಹುದ್ದೆಗಳ ಭರ್ತಿಗೆ ಈಗಾಗಲೇ ನೋಟಿಫಿಕೇಶನ್ ಹೊರಡಿಸಲಾಗಿದೆ ಹಾಗೂ ಇನ್ನೂ ೧೫೦೦ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಗಳ ನೇಮಕಾತಿಗೆ, ಪ್ರಕಟಣೆ ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡುವುದರ ಜತೆಗೆ, ಠಾಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸಹ ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಎಂದು ಸಚಿವರು ಹೇಳಿದರು.