ಮಂಜುನಾಥ್ ಶೆಟ್ಟಿ…
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತು ಅಧಿಕಾರದ ಅಹಮಿಕೆಯ ಅಂಗಳವಾಗದೆ, ಕನ್ನಡದ ಕಟ್ಟಾಳುಗಳ ಹೋರಾಟದ ವೇದಿಕೆಯಾಗಬೇಕು, ಈ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಕಸಾಪದ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯಾಗಿ ಬೆಂಬಲಿಸಿ ಗೆಲ್ಲಿಸಬೇಕೆಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಕರೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಶ್ರೀಕ್ಷೇತ್ರ ಸಿಗಂದೂರಿನ ಚೌಡೇಶ್ವರಿ ದೇವಾಲಯದಲ್ಲಿ ಆಯೋಜಿಸಿದ್ದ ‘ಕಸಾಪ ಮುಂದೇನು ಮಾತು-ಮಂಥನ’ ಜಿಲ್ಲಾ ಮಟ್ಟದ ಸಾಹಿತಿ–ಕಲಾವಿದರ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಭುತ್ವದ ಆಶಯಗಳು ತಳಮಟ್ಟದ ಜನರಿಗೂ ತಲುಪಬೇಕು. ಜನಸಾಮಾನ್ಯರು ಮತ್ತು ಆಳುವವರ ನಡುವಿನ ಸೇತುವೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸಬೇಕು ಎಂಬ ದೂರದೃಷ್ಟಿಯಿಂದ ಮಹಾರಾಜರು ಸಂಸ್ಥೆಯನ್ನು ಸ್ಥಾಪಿಸಿದರು. ಆದರೆ ಇಂದು ಕಸಾಪದ ಮೂಲ ಆಶಯ ಮಸುಕಾಗಿದ್ದು, ಅಧಿಕಾರಶಾಹಿ ಅಧಿಕಾರದ ಅಹಮಿಕೆಗೆ ಅಂಟಿಕೊಂಡಿದೆ.
ಐಎಎಸ್, ಕೆಎಎಸ್ ಅಧಿಕಾರಿಗಳು ನಿವೃತ್ತಿಯ ನಂತರ ಪರಿಷತ್ತಿನ ಚುಕ್ಕಾಣಿ ಹಿಡಿಯುವ ಪ್ರವೃತ್ತಿ ಸಂಸ್ಥೆಯ ಮೂಲ ಉದ್ದೇಶಕ್ಕೆ ಧಕ್ಕೆ ತಂದಿದೆ ಎಂಬುದು ಆತಂಕದ ಸಂಗತಿ. ಕನ್ನಡದ ನೆಲದಲ್ಲಿ ಬೆಳೆದು, ಕನ್ನಡಕ್ಕಾಗಿ ದುಡಿದು, ಸಾಹಿತ್ಯ ಮತ್ತು ಸಂಘಟನೆಯ ಮೂಲಕ ಜನರೊಂದಿಗೆ ಬೆರೆತವರ ಕೈಗೆ ಪರಿಷತ್ತು ಮರಳಬೇಕು. ಈ ಕಾರಣದಿಂದಲೇ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಅವರನ್ನು ಗುರಿಯಾಗಿಸಿಕೊಂಡು ನಡೆದ ಬೆಳವಣಿಗೆಗಳ ವಿರುದ್ಧ ಆರಂಭವಾದ ಹೋರಾಟ ಇಂದು ಮಹತ್ವದ ಘಟ್ಟ ತಲುಪಿದೆ. ಕೇಂದ್ರದ ಹಿಂದಿನ ಅಧ್ಯಕ್ಷರ ವಿರುದ್ಧ 256 ಪುಟಗಳ ವಿಚಾರಣಾ ಕೈಪಿಡಿ ಪ್ರಕಟವಾಗಿದ್ದು, ನ್ಯಾಯಾಲಯದ ಅಂತಿಮ ತೀರ್ಪಿನ ಹಂತದವರೆಗೆ ವಿಚಾರಣೆ ಸಾಗಿದೆ.
ಪರಿಷತ್ತಿನಲ್ಲಿ ದರ್ಪ, ದೌಲತ್ತು ಮತ್ತು ಸರ್ವಾಧಿಕಾರಿ ಧೋರಣೆಗಳಿಗೆ ಅವಕಾಶವಿಲ್ಲ ಎಂಬುದನ್ನು ಹೋರಾಟಗಳು ಸಾಬೀತುಪಡಿಸಿವೆ. ಹಿಂದಿನ ಕೇಂದ್ರ ಅಧ್ಯಕ್ಷರು ತಮ್ಮ ವಿರುದ್ಧ ಮಾತನಾಡುವವರನ್ನು ವಕೀಲರ ನೋಟಿಸಿನ ಮೂಲಕ ಬೆದರಿಸಲು, ಪರಿಷತ್ತಿನ ₹29 ಲಕ್ಷ ರೂಪಾಯಿ ಹಣವನ್ನು ಬಳಸಲಾಗಿದೆ. ಸಂಸ್ಥೆಯ ಸಂಪನ್ಮೂಲಗಳು ಕನ್ನಡದ ಕೆಲಸಕ್ಕೆ ವಿನಿಯೋಗವಾಗಬೇಕೇ ಹೊರತು ವೈಯಕ್ತಿಕ ಪ್ರತಿಷ್ಠೆಯ ಸಂಘರ್ಷಗಳಿಗೆ ಅಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಅಧಿಕಾರದ ಮಹಲಲ್ಲ, ಅದು ಕನ್ನಡಿಗರ ಆತ್ಮಗೌರವದ ಸಂಕೇತವಾಗಬೇಕು ಎಂದು ಪ್ರತಿಪಾದಿಸಿದರು.
ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಷತ್ತಿನ ಸದಸ್ಯರನ್ನು ಸಂಪರ್ಕಿಸಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಸಂಸ್ಥೆಯಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗಿದ್ದು, ಅಧಿಕಾರಶಾಹಿ ಮನೋಭಾವ ಮತ್ತು ಆಡಳಿತದ ಅಹಮಿಕೆ ಇದಕ್ಕೆ ಕಾರಣ.
ಐಎಎಸ್ ಕೆಎಎಸ್ ಪದವಿಯಿಂದ ನಿವೃತ್ತರಾದ ಅಧಿಕಾರಿಗಳು ತಮ್ಮ ಹಣದ ದರ್ಪ, ಆಮೀಷಗಳ ಮೂಲಕ ಗೆದ್ದು ಬಂದರು. ಕಳ್ಳ ಸಭೆಗಳ ಮೂಲಕ ತಮಗೆ ಬೇಕಾದಂತೆ ಬೈಲಾ ತಿದ್ದುಪಡಿ ಮಾಡಿಕೊಂಡು ಸರ್ವಾಧಿಕಾರಿ ಅಧಿಕಾರ ನಡೆಸಿದ್ದಾರೆ. ಕಸಾಪ ಅಧ್ಯಕ್ಷ ಎಂಬ ಅಧಿಕಾರದ ಅಹಂನಲ್ಲಿ ಮಿಂದೆದ್ದಾರೆ.
ಹಾವೇರಿ, ಮಂಡ್ಯ ಸಮ್ಮೇಳನಗಳು ಅವಮಾನ, ಗೊಂದಲಮಯ, ಹದ್ದು ಮೀರಿದ ನಡೆ ಹಿಂದಿನ ಕೇಂದ್ರ ಅಧ್ಯಕ್ಷನಾದಾಗಿತ್ತು. ರಕ್ತದ ಪ್ರತಿ ಕಣದಲ್ಲಿ ದ್ವೇಷ ಅಸೂಯೆಯ ಹುಚ್ಚಾಟ ದುರಾಡಳಿತ ಅವರು ಮಾಡಿದ್ದಾರೆ. ಪರಿಷತ್ತಿನ ಸಿಬ್ಬಂದಿಯ ಮೇಲಿನ ಶೋಷಣೆ, ಆಡಳಿತದಲ್ಲಿನ ಏಕಪಕ್ಷೀಯ ಧೋರಣೆ ಮತ್ತು ಭಿನ್ನಾಭಿಪ್ರಾಯಗಳಿಗೆ ಗೌರವ ನೀಡದ ಪ್ರವೃತ್ತಿ ಸಂಸ್ಥೆಯ ಘನತೆಗೆ ಧಕ್ಕೆ ತರುತ್ತವೆ ಎಂದರು.
ಕೋಟಿಗಟ್ಟಲೆ ಹಣಬಲದೊಂದಿಗೆ ನಿವೃತ್ತ ಐಎಎಸ್ ಅಧಿಕಾರಿಗಳ ಪ್ರಚಾರ
ಕೋಟಿ ಕೋಟಿ ಹಣದ ಬಲದೊಂದಿಗೆ ಪ್ರಚಾರದ ಅಖಾಡಕ್ಕಿಳಿಯುತ್ತಿರುವ ನಿವೃತ್ತ ಐಎಎಸ್ ಅಧಿಕಾರಿಗಳು, ಕಸಾಪದಲ್ಲಿ ನಡೆದ ಅವ್ಯವಹಾರಗಳ ಕುರಿತು ಒಂದೇ ಒಂದು ದಿನವೂ ಧ್ವನಿ ಎತ್ತಲಿಲ್ಲ. ಹಿಂದಿನ ಅಧ್ಯಕ್ಷರ ಲೂಟಿಕೋರತನವನ್ನು ಪ್ರಶ್ನಿಸುವ ಬದಲು, ಅದನ್ನು ಮುಚ್ಚಿಹಾಕಲು ಹಿಂದಿನ ಅಧ್ಯಕ್ಷರಾಗಿದ್ದ ನಿವೃತ್ತ ಅಧಿಕಾರಿಗಳೆಲ್ಲರೂ ಒಂದಾಗಿದ್ದಾರೆ. ದುಡ್ಡು ಚೆಲ್ಲಿ ಅಧಿಕಾರ ಹಿಡಿಯುವುದು, ಅಧಿಕಾರ ಬಳಸಿ ಮತ್ತಷ್ಟು ದುಡ್ಡು ಮಾಡುವುದೇ ಅವರ ರಾಜಕೀಯ ತಂತ್ರಗಾರಿಕೆ. ಅಧಿಕಾರದ ಅಹಮಿಕೆ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಕಸಾಪವನ್ನು ಮುಕ್ತಗೊಳಿಸಲು ನನಗೆ ಮತ ನೀಡಿ ಎಂದು ಜಾಣಗೆರೆ ವೆಂಕಟರಾಮಯ್ಯ ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ. ಎಚ್. ರಾಮಪ್ಪ ಮಾತನಾಡಿ, ಸಾಹಿತ್ಯ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಕ್ಷೇತ್ರವು ಸದಾ ಬೆಂಬಲ ನೀಡುತ್ತ ಬಂದಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ನವೆಂಬರ್ ಕೊನೆಯ ವಾರದಲ್ಲಿ ತಮ್ಮ ಅಧ್ಯಕ್ಷ ಅವಧಿ ಪೂರ್ಣಗೊಳ್ಳಲಿದ್ದು, ಅವಧಿಯ ಕೊನೆಯ ದಿನದವರೆಗೂ ರಾಜ್ಯೋತ್ಸವ ಸಪ್ತಾಹವನ್ನು ಆಯೋಜಿಸುವ ಆಶಯ ನಮ್ಮದಾಗಿದೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿ.ಟಿ. ಸ್ವಾಮಿ, ಪರಮೇಶ್ವರ ಕರೂರು, ಡಾ. ಶಾಂತರಾಮಪ್ರಭು, ಮಹಾದೇವಿ, ಟಿ.ಕೆ. ರಮೇಶ್ ಶೆಟ್ಟಿ, ಎಂ. ಪರಮೇಶ್, ಸತ್ಯನಾರಾಯಣ ಸಿರಿವಂತೆ, ಶಂಕರ್ ಶೇಟ್, ಷಣ್ಮುಖಾಚಾರ್, ನಾಗರಕೋಡಿಗೆ ಗಣೇಶಮೂರ್ತಿ, ಎಂ.ಆರ್. ರೇವಣಪ್ಪ, ಪ್ರಜ್ವಲ್, ಸುಧಾಮಣಿ, ಸದಾನಂದ ಶರ್ಮ, ನರಸಿಂಹಸ್ವಾಮಿ, ರೇವಣಪ್ಪ, ಶ್ರೀಪತಿ ಹಳಗುಂದ, ಜಿ.ವಿ. ಸಂಗಮೇಶ್ವರ, ನೆಂಪೆ ದೇವರಾಜ್, ಅಕ್ಷತಾ ಹುಂಚದಕಟ್ಟೆ, ವಿಜಯಾದೇವಿ, ಬಿ. ಚಂದ್ರೇಗೌಡ ಸೇರಿದಂತೆ ಹಲವು ಸಾಹಿತಿಗಳು, ಕಲಾವಿದರು ಹಾಗೂ ಕನ್ನಡಪರ ಸಂಘಟಕರು ಉಪಸ್ಥಿತರಿದ್ದರು.