ಮಂಜುನಾಥ್ ಶೆಟ್ಟಿ…

ಆಹಾರ ಭದ್ರತಾ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಇದನ್ನು ಖಾತ್ರಿಪಡಿಸುವ ಉದ್ದೇಶದಿಂದ ನಾಲ್ಕು ದಿನಗಳ ಜಿಲ್ಲಾ ಭೇಟಿ ಕೈಗೊಂಡಿದ್ದು ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಹೆಚ್ ಕೃಷ್ಣ ತಿಳಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಆಹಾರ ಆಯೋಗದ ಜಿಲ್ಲೆಯ ಭೇಟಿ ಮತ್ತು ಪರಿಶೀಲನೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.


ಹಿಂದೆ ಆಹಾರದ ಕೊರತೆ ಇತ್ತು. ಇದೀಗ ಕೊರತೆ ಇಲ್ಲ, ಆಹಾರ ನಮ್ಮ ಹಕ್ಕಾಗಿದ್ದು ಆಹಾರ ಭದ್ರತೆ ಒದಗಿಸಲಾಗಿದೆ. ಆಹಾರ ಭದ್ರತಾ ಕಾಯ್ದೆಯು ಕಾನೂನಾತ್ಮಕ ಭದ್ರತೆ ನೀಡಿದ್ದು ಸರ್ಕಾರದ ವಿವಿಧ ಆಹಾರ ಯೋಜನೆಗಳ ಪರಿಣಾಮಕಾರಿ ಅನುಷ್ಟಾನದ ಕುರಿತು ಪರಿಶೀಲನೆ ನಡೆಸಲಾಗುವುದು. ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಎಲ್ಲಾ ಹಂತದಲ್ಲಿಯೂ ಕಾಯ್ದೆಯು ಸಮರ್ಪಕವಾಗಿ ಅನುಷ್ಟಾನವಾಗಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.


ನ್ಯಾಯಬೆಲೆ ಅಂಗಡಿಗಳ ಕುರಿತು ಹೆಚ್ಚಿನ ದೂರುಗಳಿವೆ. ನ್ಯಾಯಬೆಲೆ ಅಂಗಡಿಗಳು ಸಮರ್ಪಕವಾಗಿ ಪಡಿತರ ವಿತರಣೆ ಮಾಡಬೇಕು. ತಿಂಗಳಲ್ಲಿ 26 ದಿನಗಳ ಕಾಲ ಅಥವಾ ಎಲ್ಲ ಪಡಿತರದಾರರಿಗೆ ಪಡಿತರ ವಿತರಣೆ ಆಗುವವರೆಗೆ ತೆರೆದಿರಬೇಕು.
75 ವರ್ಷ ತುಂಬಿದ ವೃದ್ದರಿಗೆ ಅವರ ಮನೆ ಬಾಗಿಲಿಗೆ ಪಡಿತರ ತಲುಪಿಸಬೇಕು. ಈ ಅನ್ನ ಸುವಿಧಾ ಯೋಜನೆ ಜಾರಿಗೆ ಬಂದು 3 ತಿಂಗಳು ಆಗಿದ್ದು ಜಿಲ್ಲೆಯಲ್ಲಿ ಇದನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು.


ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರಿಗೆ ಬಯೋಮೆಟ್ರಿಕ್ ಸಮಸ್ಯೆ ಹೇಳಬಾರದು. ಮ್ಯಾನುವಲ್ ಆಗಿ ಬರೆದು ಪಡಿತರ ನೀಡಬೇಕು. ಪಿಎಂ ಪೋಷಣ್ ಅಭಿಯಾನ, ಬಿಸಿಯೂಟ ಯೋಜನೆ, ವಸತಿ ನಿಲಯಗಳಲ್ಲಿ ಆಹಾರ, ಅಂಗನವಾಡಿಗಳಲ್ಲಿ ಗರ್ಭಿಣಿ, ಬಾಣಂತಿಯರಿಗೆ ನೀಡುವ ಪೌಷ್ಟಿಕಾಂಶ ಆಹಾರ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಸೇರಿದಂತೆ ಸರ್ಕಾರ ನೀಡುವ ಎಲ್ಲ ಆಹಾರ ಯೋಜನೆಗಳು ಸಮರ್ಪಕವಾಗಿ ಮತ್ತು ಗುಣಮಟ್ಟದೊಂದಿಗೆ ಫಲಾನುಭವಿಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ಭೇಟಿ ಮತ್ತು ಪರಿಶೀಲನೆ ನಡೆಸಲಾಗುವುದು ಎಂದರು.


ಜಿಲ್ಲೆಯಲ್ಲಿ ನಿನ್ನೆಯಿಂದ ಹಲವಾರು ಘಟಕಗಳಿಗೆ ಭೇಟಿ ನೀಡಲಾಗಿದೆ. ನ್ಯಾಯಬೆಲೆ ಅಂಗಡಿಗಳು, ಸರ್ಕಾರಿ ವಸತಿ ನಿಲಯಗಳಿಗೆ ಭೇಟಿ ನೀಡಿ ಸೂಕ್ತ ನಿರ್ದೇಶನ ನೀಡಲಾಗಿದೆ. ಎಫ್‌ಸಿಐ ಗ್ರಾಮಾಂತರ ಮತ್ತು ನಗರ ಗೋದಾಮಿಗೆ ಭೇಟಿ ನೀಡಿದ್ದು 32 ಕ್ವಿಂಟಾಲ್ 43 ಕೆಜಿ ಅಕ್ಕಿ ಹೆಚ್ಚುವರಿಯಾಗಿ ದಾಸ್ತಾನಿರುವುದು ಕಂಡು ಬಂದಿದ್ದು, ದಾಸ್ತಾನು ತೆಗೆದುಕೊಂಡು ಹೋಗದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಸೂಕ್ತ ನಿರ್ದೇಶನ ನಿಡಲಾಗಿದೆ. ನಾಳೆವರೆಗೂ ಜಿಲ್ಲೆಯ ವಿವಿಧ ಘಟಕಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.


ನ್ಯಾಯಬೆಲೆ ಅಂಗಡಿಗಳ ಅಮಾನತಿಗೆ ಸೂಚನೆ : ಶಿವಮೊಗ್ಗ ನಗರದಲ್ಲಿ ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ವೇಳೆ ಹಲವಾರು ಲೋಪದೋಷಗಳು ಕಂಡು ಬಂದಿವೆ. ನ್ಯಾಯಬೆಲೆ ಅಂಗಡಿಗೆ ನಿಗದಿತ ವೇಳೆಯೊಳಗೆ ಪಡಿತರ ತಂದು ವಿತರಿಸದೇ ಇದ್ದ ಹಾಗೂ ಇತರೆ ಲೋಪದೋಷ ಕಂಡು ಬಂದ ಅಶೋಕ ನಗರದ ಮತ್ತು ಶೇಷಾದ್ರಿಪುರಂ ಹಾಗೂ ಅಣ್ಣಾನಗರದಲ್ಲಿರುವ ನ್ಯಾಯಬೆಲೆ ಅಂಗಡಿಗಳನ್ನು ರದ್ದುಪಡಿಸಲು ನಿರ್ದೇಶನ ನೀಡಿದ್ದು, ಗುತ್ಯಪ್ಪ ಕಾಲೋನಿ ಸೇರಿದಂತೆ ಎರಡು ನ್ಯಾಯಬೆಲೆ ಅಂಗಡಿಗಳಲ್ಲಿ ಲೋಪದೋಷ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂದ ಅವರು ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ಕುರಿತು ಸಂಪೂರ್ಣವಾದ ಮಾಹಿತಿಯುಳ್ಳ ಫಲಕ ಅಳವಡಿಸುವಂತೆ ಸೂಚಿಸಲಾಗಿದೆ ಎಂದರು.


ಭದ್ರಾವತಿ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿದ ಸದಸ್ಯರು ಮಾತನಾಡಿ, ಒಂದೇ ಹಾಲಿನಲ್ಲಿ ನೂರಾರು ವಿದ್ಯಾರ್ಥಿಗಳು ಮಲಗುವ ವ್ಯವಸ್ಥೆ ಇದ್ದು, ವಸತಿ ಮತ್ತು ಆಹಾರದ ಬಗ್ಗೆ ವಿದ್ಯಾರ್ಥಿನಿಯರು ದೂರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಮಾರುತಿ ಎಂ ದೊಡ್ಡಲಿಂಗಣ್ಣವರ, ಸುಮಂತ ರಾವ್, ಕೆ ಎಸ್ ವಿಜಯಲಕ್ಷಿö್ಮ ಹಾಜರಿದ್ದರು.

Leave a Reply

Your email address will not be published. Required fields are marked *