ಮಂಜುನಾಥ್ ಶೆಟ್ಟಿ…

ಶಾಲಾ – ಪಿ ಯು ಕಾಲೇಜುಗಳಲ್ಲಿ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳು ಧರಿಸುವ ಅನುಮತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿರುವ ನೂತನ ಆದೇಶವನ್ನು ಸ್ವಾಗತಿಸಿ, ಕರ್ನಾಟಕದ ಸಿಖ್ ಸಮುದಾಯದ ಮುಖಂಡರು ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ, ಸರ್ಕಾರದ ಆದೇಶದಲ್ಲಿ ಸಿಖ್ಖರ ಪವಿತ್ರ ಸಂಕೇತಗಳಾದ ‘ಕಿರಪಾಣ್’ ಮತ್ತು ‘ಕಡಾ’ ಧರಿಸುವುದನ್ನೂ ಅಧಿಕೃತವಾಗಿ ಸೇರ್ಪಡೆ ಮಾಡುವಂತೆ ಸಮುದಾಯವು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.

ರಾಜ್ಯ ಸರ್ಕಾರವು ಮೇ 13 ರಂದು ಈ ಕುರಿತು ಮಹತ್ವದ ಆದೇಶ ಹೊರಡಿಸಿದ್ದು, ಇದು ಭಾರತೀಯ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಪ್ರಗತಿಪರ ಹೆಜ್ಜೆಯಾಗಿದೆ ಎಂದು ಶ್ರೀ ಗುರು ಸಿಂಗ್ ಸಭಾ (ಬೆಂಗಳೂರು) ಹರ್ಷ ವ್ಯಕ್ತಪಡಿಸಿದೆ. ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮ ಮತ್ತು ಸಾಂಸ್ಕೃತಿಕ ಗುರುತನ್ನು ಆಚರಿಸುವ ಹಾಗೂ ಸಂರಕ್ಷಿಸುವ ಹಕ್ಕನ್ನು ಸಂವಿಧಾನ ನೀಡಿದ್ದು, ಅಲ್ಪಸಂಖ್ಯಾತ ಸಮುದಾಯಗಳ ಸಂಪ್ರದಾಯಗಳನ್ನು ಶೈಕ್ಷಣಿಕ ಚೌಕಟ್ಟಿನಲ್ಲಿ ಗೌರವಿಸುವ ಸರ್ಕಾರದ ಈ ನಡೆಯು ಅತ್ಯಂತ ಶ್ಲಾಘನೀಯ ಎಂದು ಸಭಾದ ಅಧ್ಯಕ್ಷ ಪ್ರಿತ್‌ಪಾಲ್ ಸಿಂಗ್ ಭಾಟಿಯಾ ನೇತೃತ್ವದ ನಿಯೋಗವು ಮೆಚ್ಚುಗೆ ವ್ಯಕ್ತಪಡಿಸಿದೆ.

ಸಿಖ್ ಸಮುದಾಯಕ್ಕೆ ಪೇಟ, ಕಿರಪಾಣ್ ಮತ್ತು ಕಡಾ ಕೇವಲ ಉಡುಪಿನ ಭಾಗಗಳಲ್ಲ, ಬದಲಾಗಿ ಅವು ಧಾರ್ಮಿಕ ಬದ್ಧತೆ ಮತ್ತು ಗುರುತಿನ ಪವಿತ್ರ ಸಂಕೇತಗಳಾಗಿವೆ ಎಂದು ಮುಖಂಡರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಸರ್ಕಾರದ ಪ್ರಸ್ತುತ ಸುತ್ತೋಲೆಯಲ್ಲಿ ಕೇವಲ ‘ಪೇಟ’ವನ್ನು ಮಾತ್ರ ಉಲ್ಲೇಖಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಿಖ್ ಧರ್ಮದ ಅತ್ಯವಶ್ಯಕ ಧಾರ್ಮಿಕ ಸಂಕೇತಗಳಾದ ಕಿರಪಾಣ್ ಮತ್ತು ಕಡಾವನ್ನೂ ಈ ಆದೇಶದಲ್ಲಿ ಸೇರಿಸಬೇಕು ಎಂದು ಸರ್ಕಾರವನ್ನು ಕೋರಲಾಗಿದೆ.

ಸರ್ಕಾರದ ಈ ತೀರ್ಮಾನವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಹಾಗೂ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಬಹುದೊಡ್ಡ ಕೊಡುಗೆ ನೀಡಲಿದೆ ಮತ್ತು ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಘನತೆಯಿಂದ ಶಿಕ್ಷಣ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ. ಕೋಮು ಸೌಹಾರ್ದತೆಯನ್ನು ಉತ್ತೇಜಿಸುವ ಮತ್ತು ಎಲ್ಲಾ ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ಸರ್ಕಾರದ ಸೂಕ್ಷ್ಮ ಹಾಗೂ ಮುತ್ಸದ್ದಿತನದ ನಾಯಕತ್ವಕ್ಕೆ ಆಭಾರಿಯಾಗಿದ್ದೇವೆ ಎಂದು ಸಿಖ್ ಸಮುದಾಯವು ಸರ್ಕಾರಕ್ಕೆ ಸಲ್ಲಿಸಿರುವ ಪತ್ರದಲ್ಲಿ ಧನ್ಯವಾದ ಸಮರ್ಪಿಸಿದೆ.

ಜಿ.ಡಿ. ಮಂಜುನಾಥ್ ವಕ್ತಾರರು
ಜಿಲ್ಲಾ ಕಾಂಗ್ರೆಸ್ ಸಮಿತಿ ಶಿವಮೊಗ್ಗ.

Leave a Reply

Your email address will not be published. Required fields are marked *