ಮಂಜುನಾಥ್ ಶೆಟ್ಟಿ…
ಶಿವಮೊಗ್ಗ: “ಶಿವಮೊಗ್ಗ ನಗರದ ಪ್ರತಿಯೊಂದು ಬಡಾವಣೆಯಲ್ಲೂ ಸುಸಜ್ಜಿತ ಉದ್ಯಾನವನಗಳನ್ನು (Parks) ಅಭಿವೃದ್ಧಿಪಡಿಸುವ ಮೂಲಕ ಸಾರ್ವಜನಿಕರಿಗೆ ಸ್ವಚ್ಛ, ಮಾಲಿನ್ಯಮುಕ್ತ ಮತ್ತು ಆಹ್ಲಾದಕರ ವಾತಾವರಣ ಕಲ್ಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.
ನಗರದ ಯೋಜಿತ ಹಸಿರೀಕರಣ ಹಾಗೂ ಮೂಲಸೌಕರ್ಯ ಸುಧಾರಣೆಯ ಅಂಗವಾಗಿ ಇಂದು ಬೆಳಿಗ್ಗೆ ಶಾಸಕರು ಕ್ಷೇತ್ರ ವ್ಯಾಪ್ತಿಯ ಪಾರ್ಶ್ವನಾಥ ಬಡಾವಣೆ, ನಾಗರಿಕಟ್ಟೆ ಬಡಾವಣೆ ಹಾಗೂ ಆಲ್ ಅರಿಂ ಲೇಔಟ್ ಪಾರ್ಕ್‌ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸ್ತ್ರೋಕ್ತವಾಗಿ ಗುದ್ದಲಿ ಪೂಜೆ ನೆರವೇರಿಸಿ ಅಧಿಕೃತವಾಗಿ ಚಾಲನೆ ನೀಡಿದರು.
ಬಳಿಕ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡ ಶಾಸಕರು, “ಬಡಾವಣೆಗಳಲ್ಲಿ ಪಾರ್ಕ್‌ಗಳ ಸುಧಾರಣೆಯು ಸಾರ್ವಜನಿಕರ ಮತ್ತು ಮಕ್ಕಳ ಆರೋಗ್ಯಕರ ಜೀವನಶೈಲಿಗೆ ಅತ್ಯಗತ್ಯವಾಗಿದೆ. ಕಾಮಗಾರಿಗಳನ್ನು ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ಗುಣಮಟ್ಟದಿಂದ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ,” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಡಾವಣೆಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿದ ಶಾಸಕರು, ಸ್ಥಳೀಯ ಇತರ ನಾಗರಿಕ ಬೇಡಿಕೆಗಳನ್ನು ಆಲಿಸಿ ಹಂತ-ಹಂತವಾಗಿ ಈಡೇರಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಬಡಾವಣೆಗಳ ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.