ಮಂಜುನಾಥ ಶೆಟ್ಟಿ…
ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ರವರ ನೇತೃತ್ವದಲ್ಲಿ ಮುಂಬರುವ ಈದ್ ಮೀಲಾದ್ ಹಾಗೂ ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಹಿಂದೂ–ಮುಸ್ಲಿಂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ನಗರದ ಶಾಂತಿನಗರ ರಾಗಿಗುಡ್ಡದಲ್ಲಿ ಪೊಲೀಸ್ ರೂಟ್ ಮಾರ್ಚ್ ಹಾಗೂ ಶಾಂತಿ ಸಭೆಯನ್ನು ಆಯೋಜಿಸಲಾಯಿತು.
ನಗರದಲ್ಲಿ ನಡೆದ ರೂಟ್ ಮಾರ್ಚ್‌ನಲ್ಲಿ ಪೊಲೀಸರು ಭಾಗವಹಿಸಿ, ಪ್ರದೇಶದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಬಳಿಕ ರಾಗಿಗುಡ್ಡದ ಶಾಂತಿನಗರದಲ್ಲಿ ಶಾಂತಿ ಸಭೆ ನಡೆಸಿ, ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕರು ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಸಹಕಾರದೊಂದಿಗೆ ನಡೆದುಕೊಳ್ಳುವಂತೆ ಮನವಿ ಮಾಡಲಾಯಿತು.
ಶಾಂತಿನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಅವರನ್ನು ಶಾಂತಿನಗರದ ಜನತೆಯ ಪರವಾಗಿ ಶಹಾಬುದ್ದಿನ್ ಬಾಬು ಅವರ ನೇತೃತ್ವದಲ್ಲಿ ಮುಖಂಡರು ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಂತಿನಗರದ ಮುಖಂಡರಾದ ನಾಗರಾಜಣ್ಣ, ನೂರ್ ಮಸೀದಿ ಅಧ್ಯಕ್ಷ ಭಾಷಾಸಾಬ್ ಹುಣಸಘಟ್ಟ, ವಕೀಲ ರಾಮಚಂದ್ರ, ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆ ಅಧ್ಯಕ್ಷ ಸಯ್ಯದ್ ಮುಜಿಬುಲ್ಲ, ಬಸವರಾಜ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೇ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಅವರು ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅತ್ಯಮೂಲ್ಯ ಎಂದು ಹೇಳಿದರು. ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಗೌರವ ಹಾಗೂ ಅನ್ಯೋನ್ಯತೆಯಿಂದ ಬದುಕಬೇಕು. ಯಾವುದೇ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಕರೆ ನೀಡಿದರು.