ಮಂಜುನಾಥ್ ಶೆಟ್ಟಿ…
ಶಿವಮೊಗ್ಗ: ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ ಸೇರ್ಪಡೆಗೊಳಿಸಬೇಕು ಎಂದು ಕೈಗಾರಿಕೋದ್ಯಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿಗಾಗಿ ಬೆಂಗಳೂರಿನ ಹೊರಗಿನ ಐದು ನಗರಗಳಲ್ಲಿ ಶಿವಮೊಗ್ಗ ನಗರ ಗುರುತಿಸಬೇಕು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರಾಥಮಿಕ ಕ್ಲಸ್ಟರ್, ವಿಮಾನ ನಿಲ್ದಾಣ ಮೂಲಸೌಕರ್ಯ, ಬಲಿಷ್ಠ ತಂತ್ರಜ್ಞಾನ ಮತ್ತು ಶೈಕ್ಷಣಿಕ ಮೂಲಾಧಾರ, ರೈಲು ಮತ್ತು ರಸ್ತೆ ಲಾಜಿಸ್ಟಿಕ್ಸ್ ಸಂಪರ್ಕವನ್ನು ಶಿವಮೊಗ್ಗ ಹೊಂದಿದೆ ಎಂದು ತಿಳಿಸಿದರು.
ಫೌಂಡ್ರಿ ಉದ್ಯಮ, ಆಹಾರ ಸಂಸ್ಕರಣೆ ಘಟಕ, ಕೃಷಿ ಉತ್ಪಾದನೆ, ಶಿಮೂಲ್, ಜವಳಿ ಉದ್ಯಮ ಸೇರಿ ಹೆಚ್ಚು ಪರಿಣತಿ ಹೊಂದಿರುವ ಹೆಚ್ಚು ಕೈಗಾರಿಕಾ ಘಟಕಗಳಿವೆ. ಶಿವಮೊಗ್ಗ ಪ್ರಮುಖ ಉತ್ಪಾದನಾ ಮತ್ತು ಎಂಜಿನಿಯರಿಂಗ್ ಕೇಂದ್ರವಾಗಿದೆ. ಈ ಎಲ್ಲ ಕಾರಣಗಳಿಂದ ಶಿವಮೊಗ್ಗ ಜಿಲ್ಲೆಯನ್ನು ಕೈಗಾರಿಕಾ ಅಭಿವೃದ್ಧಿ ನಗರವನ್ನಾಗಿ ಪರಿಗಣಿಸಬೇಕು ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡುವ ಮತ್ತು ಬೆಂಗಳೂರಿನ ಹೊರಗೆ ಹೂಡಿಕೆಗಳನ್ನು ಉತ್ತೇಜಿಸುವ ಕಾರ್ಯತಂತ್ರದ ಭಾಗವಾಗಿ ಕರ್ನಾಟಕ ಸರ್ಕಾರವು ಶಿವಮೊಗ್ಗ ಜಿಲ್ಲೆಗಳಲ್ಲಿ ಕೈಗಾರಿಕಾ ಸೌಲಭ್ಯಗಳನ್ನು ಸ್ಥಾಪಿಸಲು ಸರ್ಕಾರವು ಬಹುಕಂಪನಿಗಳೊಂದಿಗೆ ಚರ್ಚೆಗಳನ್ನು ಪ್ರಾರಂಭಿಸಬೇಕಿದೆ ಎಂದು ಹೇಳಿದರು.
ಬಿಯಾಂಡ್ ಬೆಂಗಳೂರು ಶಿವಮೊಗ್ಗ ನಗರವನ್ನು ಐಟಿ ಸೇವೆಗಳ ರಫ್ತುದಾರರನ್ನಾಗಿ ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ಡಿಜಿಟಲ್ ಶಕ್ತಿ ಕೇಂದ್ರವಾಗುವ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಶಿವಮೊಗ್ಗ ಐಟಿ ಕಂಪನಿಗಳಿಗೆ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ. ಈ ದಿಸೆಯಲ್ಲಿ ನಮ್ಮ ಸಂಸ್ಥೆಯು ಸರ್ಕಾರದ ಎಲ್ಲ ಪ್ರಯತ್ನಗಳಿಗೆ ಕೈ ಜೋಡಿಸುತ್ತದೆ ಎಂದರು.
ಸರ್ಕಾರವು ಮೂಲಸೌಕರ್ಯವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಹೂಡಿಕೆ ಮಾಡಬೇಕು. ಶಿವಮೊಗ್ಗ ಜಿಲ್ಲೆಯ ಕೈಗಾರಿಕೆಗಳ ಉದ್ಯಮವನ್ನು ಸರ್ಕಾರವು ಬೆಂಬಲಿಸುವುದು ನಿರ್ಣಾಯಕವಾಗಿದೆ ಎಂದು ತಿಳಿಸಿದರು.