ಮಂಜುನಾಥ್ ಶೆಟ್ಟಿ…

ರಾಜ್ಯದಲ್ಲಿ ಎದುರಾಗಿರುವ ಬರವನ್ನು ಕೇವಲ ಮಳೆ ಕೊರತೆಯ ಸಮಸ್ಯೆಯಾಗಿ ನೋಡದೆ, ಅಂತರ್ಜಲ, ನೀರಾವರಿ, ಕೃಷಿ ವಿದ್ಯುತ್, ಬೆಳೆ ರಕ್ಷಣೆ ಹಾಗೂ ರೈತನ ಆದಾಯವನ್ನು ಸಮಗ್ರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ರೂಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಸರ್ಕಾರವನ್ನು ಒತ್ತಾಯಿಸಿದರು.

ವಿಧಾನ ಪರಿಷತ್ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಸಾಮಾನ್ಯ 852 ಮಿ.ಮೀ. ಮಳೆಯ ಬದಲು 642 ಮಿ.ಮೀ. ಮಾತ್ರ ಮಳೆಯಾಗಿದ್ದು, ದಕ್ಷಿಣ ಒಳನಾಡಿನಲ್ಲಿ 46% ಹಾಗೂ ಉತ್ತರ ಒಳನಾಡಿನಲ್ಲಿ 44% ಮಳೆ ಕೊರತೆ ದಾಖಲಾಗಿದೆ ಎಂದು ಉಲ್ಲೇಖಿಸಿದರು.
ಕೇಂದ್ರ ಅಂತರ್ಜಲ ಮಂಡಳಿಯ 2024ರ ವರದಿ ಪ್ರಕಾರ ಕರ್ನಾಟಕದಲ್ಲಿ ವಾರ್ಷಿಕ ಅಂತರ್ಜಲ ಮರುಪೂರಣ 18.74 ಬಿಲಿಯನ್ ಘನ ಮೀಟರ್, ಬಳಸಬಹುದಾದ ಅಂತರ್ಜಲ 16.88 ಬಿಲಿಯನ್ ಘನ ಮೀಟರ್ ಹಾಗೂ ವಾರ್ಷಿಕ ಬಳಕೆ 11.55 ಬಿಲಿಯನ್ ಘನ ಮೀಟರ್ ಆಗಿದೆ. ಅಂತರ್ಜಲ ಬಳಕೆಯ ಪ್ರಮಾಣ 68.44% ತಲುಪಿದ್ದು, 237 ಮೌಲ್ಯಮಾಪನ ಘಟಕಗಳಲ್ಲಿ 45 ಅತಿದೋಹಿತ, 15 ಗಂಭೀರ ಹಾಗೂ 33 ಅರೆ-ಗಂಭೀರ ಸ್ಥಿತಿಯಲ್ಲಿವೆ ಎಂದು ಹೇಳಿದರು.

“ಪ್ರತಿ ಬಾರಿ ಹೊಸ ಕೊಳವೆಬಾವಿ ಕೊರೆದು ನೀರನ್ನು ಹೊರತೆಗೆಯುವುದೇ ಪರಿಹಾರವಲ್ಲ. ಮಳೆನೀರು ಸಂಗ್ರಹ, ಅಂತರ್ಜಲ ಮರುಪೂರಣ, ಹನಿ ಮತ್ತು ತುಂತುರು ನೀರಾವರಿ ಹಾಗೂ ಗ್ರಾಮಮಟ್ಟದ ಜಲ ಆಯವ್ಯಯಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಂದು ಬರಪೀಡಿತ ತಾಲೂಕಿಗೂ ವಾರ್ಷಿಕ ಜಲಧಾರಾ ಸಮತೋಲನ ಪತ್ರ ಸಿದ್ಧಪಡಿಸಬೇಕು” ಎಂದು ಸಲಹೆ ನೀಡಿದರು.

ಅಟಲ್ ಭೂಜಲ ಯೋಜನೆಯಡಿ ಕರ್ನಾಟಕದಲ್ಲಿ ಈಗಾಗಲೇ 970 ಡಿಜಿಟಲ್ ಜಲಮಟ್ಟ ದಾಖಲಕಗಳನ್ನು ಅಳವಡಿಸಲಾಗಿದ್ದು, 1.86 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶ ದಕ್ಷ ಜಲಬಳಕೆಯ ವ್ಯಾಪ್ತಿಗೆ ಬಂದಿದೆ. ರಾಜ್ಯದಲ್ಲಿ 2016-17ರವರೆಗೆ 9.17 ಲಕ್ಷ ಹೆಕ್ಟೇರ್ ಪ್ರದೇಶ ಸೂಕ್ಷ್ಮ ನೀರಾವರಿ ವ್ಯಾಪ್ತಿಗೆ ಬಂದಿದ್ದು, ಅದರಲ್ಲಿ 3.97 ಲಕ್ಷ ಹೆಕ್ಟೇರ್ ಹನಿ ನೀರಾವರಿ ಹಾಗೂ 5.19 ಲಕ್ಷ ಹೆಕ್ಟೇರ್ ತುಂತುರು ನೀರಾವರಿ ವ್ಯಾಪ್ತಿಯಲ್ಲಿತ್ತು ಎಂದು ತಿಳಿಸಿದರು.

2026-27ರ ಬಜೆಟ್‌ನಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ₹19,290 ಕೋಟಿ, ನೀರಾವರಿ ಮತ್ತು ಪ್ರವಾಹ ನಿಯಂತ್ರಣಕ್ಕೆ ₹22,430 ಕೋಟಿ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆt ₹23,970 ಕೋಟಿ ಹಾಗೂ ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಗೆ ₹1,700 ಕೋಟಿ ಮೀಸಲಾಗಿದೆ. ಈ ನೆರವನ್ನು ಕಡಿತಗೊಳಿಸುವ ಬದಲು ದಕ್ಷ ಪಂಪ್‌ಗಳು, ಸೌರಶಕ್ತಿ, ಹನಿ ನೀರಾವರಿ ಹಾಗೂ ಅಂತರ್ಜಲ ಮೇಲ್ವಿಚಾರಣೆಯೊಂದಿಗೆt ಸಮನ್ವಯಗೊಳಿಸಬೇಕು ಎಂದು ಅವರು ಹೇಳಿದರು.

ಕೇಂದ್ರದ ಬರ ಪರಿಹಾರದ ಕುರಿತು ನಡೆಯುತ್ತಿರುವ ಚರ್ಚೆಯನ್ನು ಉಲ್ಲೇಖಿಸಿದ ಅವರು, 2024-25ರಲ್ಲಿ ಕರ್ನಾಟಕಕ್ಕೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿಯಿಂದ ₹3,454.22 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಶಿವಮೊಗ್ಗ ಭಾಗದ ಸಮಸ್ಯೆಗಳತ್ತ ಗಮನ ಸೆಳೆದ ಸರ್ಜಿ, ತುಂಗಾ–ಭದ್ರಾ ನೀರಾವರಿ ಸಂಬಂಧಿತ ಬಾಕಿ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು, ಉಬ್ರಾಣಿ ಏತ ನೀರಾವರಿ ಯೋಜನೆಯ ಪಂಪ್ ಸಮಸ್ಯೆಯನ್ನು ಸರಿಪಡಿಸಬೇಕು, ಹಾಲು ಉತ್ಪಾದಕರ ಪ್ರೋತ್ಸಾಹಧನ ಹೆಚ್ಚಿಸಬೇಕು, ಭದ್ರಾವತಿ ಭಾಗದ ಮೀನುಮರಿ ಉತ್ಪಾದಕರಿಗೆ ಸರ್ಕಾರದ ಖರೀದಿ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆದ ನಂತರ ವಿದ್ಯುತ್ ಸಂಪರ್ಕಕ್ಕೆ ಮೂರು–ನಾಲ್ಕು ವರ್ಷ ಕಾಯುವ ಪರಿಸ್ಥಿತಿ ತಪ್ಪಿಸಲು ನಿಗದಿತ ಕಾಲಮಿತಿ ರೂಪಿಸಬೇಕು. ಜೂನ್‌ಗೂ ಮುನ್ನ ಸಂಭವಿಸುವ ಸುಂಟರಗಾಳಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ಹಾನಿಗೂ ವಿಮಾ ರಕ್ಷಣೆ ದೊರೆಯುವಂತೆ ಬೆಳೆ ವಿಮಾ ನಿಯಮಗಳನ್ನು ಪರಿಷ್ಕರಿಸಬೇಕು ಎಂದು ಮನವಿ ಮಾಡಿದರು.

“ಬರ ಪರಿಹಾರಕ್ಕೆ ಎಷ್ಟು ಕೋಟಿ ಖರ್ಚಾಯಿತು ಎಂಬುದಷ್ಟೇ ಸಾಧನೆಯ ಮಾನದಂಡವಾಗಬಾರದು. ಎಷ್ಟು ರೈತರಿಗೆ ನೆರವು ತಲುಪಿತು, ಎಷ್ಟು ಅಂತರ್ಜಲ ಮರುಪೂರಣವಾಯಿತು, ನೀರಿನ ಬಳಕೆ ಎಷ್ಟು ಕಡಿಮೆಯಾಯಿತು, ಬೆಳೆ ಉತ್ಪಾದಕತೆ ಮತ್ತು ರೈತನ ಆದಾಯ ಎಷ್ಟು ಹೆಚ್ಚಿತು ಎಂಬುದೇ ನಿಜವಾದ ಫಲಿತಾಂಶವಾಗಬೇಕು. ಬರ ಬಂದ ನಂತರ ಪರಿಹಾರ ನೀಡುವ ವ್ಯವಸ್ಥೆಯಿಂದ, ಬರ ಬರುವ ಮೊದಲೇ ರೈತನನ್ನು ರಕ್ಷಿಸುವ ವ್ಯವಸ್ಥೆಯತ್ತ ಕರ್ನಾಟಕ ಸಾಗಬೇಕು” ಎಂದು ಡಾ. ಧನಂಜಯ ಸರ್ಜಿ ಹೇಳಿದರು.

Leave a Reply

Your email address will not be published. Required fields are marked *