ಮಂಜುನಾಥ್ ಶೆಟ್ಟಿ…

ಭದ್ರಾವತಿ ನಗರದ ವಿವಿಧ ಹೋಟೆಲ್ಗಳು, ಬೇಕರಿಗಳು ಹಾಗೂ ಸಿಹಿ ತಿನಿಸುಗಳ ತಯಾರಿಕೆ ಮತ್ತು ಮಾರಾಟ ಕೇಂದ್ರಗಳ ಮೇಲೆ ಬುಧವಾರ ಉಪವಿಭಾಗಾಧಿಕಾರಿ ಡಾ. ಹೆಚ್.ಪಿ.ಎಸ್. ಮೈತ್ರಿ ಹಾಗೂ ತಹಶೀಲ್ದಾರ್ ಪ್ರದೀಪ್ ದೇವಗಿರಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದರು.

ಈ ವೇಳೆ ರಾಸಾಯನಿಕ ಬಣ್ಣ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆಗಾಗಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಯಿತು.
ದಾಳಿಯ ಸಂದರ್ಭದಲ್ಲಿ ಅವಧಿ ಮುಗಿದ ಅಡುಗೆ ಪದಾರ್ಥಗಳ ಬಳಕೆ, ಆಹಾರ ತಯಾರಿಕೆಯಲ್ಲಿ ರಾಸಾಯನಿಕ ವಸ್ತುಗಳ ಬಳಕೆ, ತಿನಿಸುಗಳ ಪ್ಯಾಕೆಟ್ಗಳ ಮೇಲೆ ದರ ಮತ್ತು ಅವಧಿ ನಮೂದಿಸುವ ಲೇಬಲ್ಗಳನ್ನು ಅಳವಡಿಸದಿರುವುದು ಹಾಗೂ ಸ್ವಚ್ಛತೆಯ ಕೊರತೆ ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಂಗಡಿ ಮತ್ತು ಹೋಟೆಲ್ ಮಾಲೀಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಪಾನ್ ಶಾಪ್ಗಳಲ್ಲಿ ಬೀಡಾ ತಯಾರಿಕೆಗೆ ಬಳಸುವ ಪದಾರ್ಥಗಳ ಸಂಗ್ರಹಣೆ ಹಾಗೂ ಸ್ವಚ್ಛತೆಯ ಬಗ್ಗೆಯೂ ಪರಿಶೀಲನೆ ನಡೆಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಸೇವಿಸಿ ಪಾದಚಾರಿಗಳು ಸಂಚರಿಸುವ ದಾರಿಗಳಲ್ಲಿ ಉಗುಳಿರುವುದನ್ನು ಗಮನಿಸಿದ ಉಪವಿಭಾಗಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರದೀಪ್ ದೇವಗಿರಿ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಎಫ್ಎಸ್ಎಸ್ಎಐ ಫುಡ್ ಇನ್ಸ್ಪೆಕ್ಟರ್ಗಳಾದ ಶಶಿಕುಮಾರ್, ಮನೋಜ್ ಬಿ.ಎಂ., ಉಮೇಶ್, ಮನೋಜ್ ಮತ್ತು ಸುಮಾ, ಉಪತಹಶೀಲ್ದಾರ್ ಮಂಜ ನಾಯಕ್, ಕಂದಾಯ ನಿರೀಕ್ಷಕ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಕೂಡ್ಲಿಗೆರೆ ಹಾಗೂ ಆರ್ಐ ಅನಿಲ್ ರಾಜ್ ಪಾಲ್ಗೊಂಡಿದ್ದರು.