ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ನಗರದ ದಸರಾ ಜಂಬೂ ಸವಾರಿ ಸಂದರ್ಭದಲ್ಲಿ ಸೋಮಣ್ಣ ಆನೆ ಬೆದರಿ ಅಂಬಾರಿ ಕೆಳಗೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬೇಜಜವಾಬ್ದಾರಿಯುತ ಅಧಿಕಾರಿಗಳನ್ನು ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಸಂಘಟನೆ ಆಗ್ರಹಿಸಿದೆ.
ಜಂಬೂ ಸವಾರಿಯಲ್ಲಿ ನಡೆದ ಅವಘಡವನ್ನು ಖಂಡಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ರವಿಪ್ರಸಾದ್ ಎಂ. ಅವರು, ಆನೆಗೆ ಸಮರ್ಪಕವಾಗಿ ತಾಲೀಮು ನೀಡದೆ, ಜನಸಂದಣಿ ಮತ್ತು ವಾದ್ಯಗಳ ಭಾರೀ ಶಬ್ದಕ್ಕೆ ಒಗ್ಗಿಕೊಳ್ಳದ ಆನೆಯನ್ನು ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿರುವುದು ಗಂಭೀರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ದಸರಾ ಉತ್ಸವದಂತಹ ದೊಡ್ಡ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆನೆಗಳನ್ನು ಪಾಲ್ಗೊಳ್ಳುವಂತೆ ಮಾಡುವ ಮೊದಲು ಅವುಗಳ ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥಿತಿ, ತರಬೇತಿ ಹಾಗೂ ಜನಸಂದಣಿಯಲ್ಲಿ ವರ್ತಿಸುವ ಸಾಮರ್ಥ್ಯವನ್ನು ಪರಿಶೀಲಿಸಬೇಕಿತ್ತು. ಆದರೆ, ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದೆ ಆನೆಯ ಮೇಲೆ ಅಂಬಾರಿ ಹೊರಿಸಿ ಮೆರವಣಿಗೆಯಲ್ಲಿ ಕರೆತಂದ ಪರಿಣಾಮ ಈ ಅವಘಡ ಸಂಭವಿಸಿದೆ ಎಂಬುದು ಸಂಘಟನೆಯ ಆರೋಪವಾಗಿದೆ.
ದಸರಾ ಜಂಬೂಸವಾರಿಗೆ ಆನೆಗಳನ್ನು ಕರೆತರುವುದು ಮತ್ತು ಅಂಬಾರಿ ಹೊರಿಸುವ ವ್ಯವಸ್ಥೆಗಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಈ ಸಮಿತಿಯ ಮುಖ್ಯಸ್ಥರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಿ, ಆನೆಗಳ ಆಯ್ಕೆ, ತರಬೇತಿ, ಭದ್ರತಾ ವ್ಯವಸ್ಥೆ ಹಾಗೂ ಮೆರವಣಿಗೆಯ ನಿರ್ವಹಣೆಯಲ್ಲಿ ಲೋಪವಾಗಿದೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಆಗ್ರಹಿಸಿದೆ.
ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಪ್ರಮುಖ ಅಧಿಕಾರಿಗಳಾದ ಹನುಮಂತಪ್ಪ ಮತ್ತು ಪಟಗಾರ ಅವರನ್ನು ತಕ್ಷಣ ಅಮಾನತುಗೊಳಿಸಿ ತನಿಖೆಗೆ ಆದೇಶಿಸಬೇಕು ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಧುಸೂದನ್ ಎಸ್.ಎಂ. ಒತ್ತಾಯಿಸಿದರು.
ಜಂಬೂಸವಾರಿ ಸಂದರ್ಭದಲ್ಲಿ ನಡೆದ ಘಟನೆಯ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ, ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ದಸರಾ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆನೆಗಳನ್ನು ಬಳಸುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕ್ರಮ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆನೆ ಪ್ರಿಯರಾದ ದೀಪಕ್ ನಾಡಿಗ್, ರಾಗಿಗುಡ್ಡದ ರಮೇಶ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ನವಲೆ, ಜಿಲ್ಲಾ ಉಪಾಧ್ಯಕ್ಷರಾದ ಎಂ. ನಯಾಜ್, ಮಹೇಶ್, ನೂರಾ, ಜಿಲ್ಲಾ ವಕ್ತಾರ ಭರತ್ ಎಸ್. ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.