ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ಔಷಧ ಕ್ಷೇತ್ರದಲ್ಲಿ ಸಣ್ಣ ತಪ್ಪು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಹೀಗಾಗಿ ಫಾರ್ಮಸಿ ವಿದ್ಯಾರ್ಥಿಗಳು ಆಳವಾದ ಜ್ಞಾನ, ವೃತ್ತಿಪರ ಪರಿಣತಿ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಿ ಎಂದು ವಿಧಾನಪರಿಷತ್ತಿನ ಸದಸ್ಯರಾದ ಡಾ.ಧನಂಜಯ ಸರ್ಜಿ ಹೇಳಿದರು.

ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಡಿ.ಫಾರ್ಮ್ ಮತ್ತು ಬಿ.ಫಾರ್ಮ್ ವಿದ್ಯಾರ್ಥಿಗಳ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಯಾವುದೇ ಕಾರ್ಯವನ್ನು ಆರಂಭಿಸುವ ಮೊದಲು ‘ಯಾಕೆ?’ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಈ ಪ್ರಶ್ನೆಯೇ ಆತ್ಮಾವಲೋಕನಕ್ಕೆ, ಹೊಸತನದ ಹುಡುಕಾಟಕ್ಕೆ ಹಾಗೂ ಸಂಶೋಧನಾತ್ಮಕ ಚಿಂತನೆಗೆ ಪ್ರೇರಣೆ ನೀಡುತ್ತದೆ. ಜಗತ್ತಿನ ಅನೇಕ ಮಹತ್ವದ ಆವಿಷ್ಕಾರಗಳ ಹಿಂದೆ ಇಂತಹ ಕುತೂಹಲದ ಪ್ರಶ್ನೆಗಳೇ ಕಾರ್ಯನಿರ್ವಹಿಸಿವೆ.

ಭಾರತದ ಔಷಧೋದ್ಯಮವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ದೇಶದ ಔಷಧೋದ್ಯಮದ ವಹಿವಾಟು ಸುಮಾರು ₹4.72 ಲಕ್ಷ ಕೋಟಿ ತಲುಪಿದ್ದು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಔಷಧಗಳನ್ನು ಒದಗಿಸುವ ಜನರಿಕ್ ಔಷಧಗಳ ಉತ್ಪಾದನೆಯಲ್ಲಿ ಭಾರತ ಮಹತ್ವದ ಪಾತ್ರ ವಹಿಸುತ್ತಿದೆ. ಈ ಕ್ಷೇತ್ರದಲ್ಲಿ ಸವಾಲುಗಳಿರುವಂತೆಯೇ ವಿಪುಲ ಅವಕಾಶಗಳೂ ಇವೆ. ವಿದ್ಯಾರ್ಥಿಗಳು ತಮ್ಮ ಜ್ಞಾನ, ಕೌಶಲ ಮತ್ತು ನವೀನ ಚಿಂತನೆಯ ಮೂಲಕ ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಖ್ಯಾತ ಮನಃಶಾಸ್ತ್ರಜ್ಞ ಡಾ. ಎಸ್.ಟಿ. ಅರವಿಂದ ಮಾತನಾಡಿ, ಶ್ರದ್ಧೆ, ಅರ್ಪಣಾ ಮನೋಭಾವ ಹಾಗೂ ಆತ್ಮವಿಶ್ವಾಸ ಸಾಧನೆಗೆ ಅಗತ್ಯವಾದ ಗುಣಗಳು. ವಿದ್ಯಾರ್ಥಿ ಜೀವನದಲ್ಲಿ ಗೊಂದಲಗಳು ಮತ್ತು ಆಕರ್ಷಣೆಗಳು ಸಹಜ. ಆದರೆ ಅವುಗಳಿಗೆ ಮಣಿಯದೆ, ಗುರಿಯತ್ತ ಗಮನ ಕೇಂದ್ರೀಕರಿಸುವ ಮನೋಬಲ ಬೆಳೆಸಿಕೊಳ್ಳಬೇಕು.

ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಸದೃಢರಾಗಿರುವವರೇ ನಿಜವಾದ ಆರೋಗ್ಯವಂತರು. ಇಂದಿನ ಯುವಜನರಲ್ಲಿ ಗಮನ ಬೇರೆಡೆ ಸೆಳೆಯುವ ಅಂಶಗಳು ಹೆಚ್ಚಾಗುತ್ತಿದ್ದು, ಭಾವನಾತ್ಮಕ ಸೂಕ್ಷ್ಮತೆ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಮಕ್ಕಳನ್ನು ಅತಿಯಾದ ಕಾಳಜಿಯಿಂದ ಬೆಳೆಸುವುದಷ್ಟೇ ಮುಖ್ಯವಲ್ಲ, ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನೂ ಬೆಳೆಸಬೇಕು. ಟೀಕೆಗಳನ್ನು ಸ್ವೀಕರಿಸುವ ಗುಣ, ಸೋಲಿನಿಂದ ಕಲಿಯುವ ಮನೋಭಾವ ಮತ್ತು ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿರಬೇಕು.

ವೈದ್ಯರ ಸಲಹೆಯಿಲ್ಲದೆ ಔಷಧಗಳನ್ನು ಸೇವಿಸುವ ಪ್ರವೃತ್ತಿ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲಾಗಿದೆ. ಔಷಧಗಳ ಸುರಕ್ಷಿತ ಬಳಕೆ ಮತ್ತು ಜವಾಬ್ದಾರಿಯುತ ವಿತರಣೆಯಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ನಿರ್ಣಾಯಕವಾಗಿದೆ. ಹೀಗಾಗಿ ಔಷಧಗಳ ಕುರಿತು ಸಮಗ್ರ ಜ್ಞಾನ ಹೊಂದುವುದರ ಜೊತೆಗೆ, ವಿವಿಧ ದೇಶಗಳ ಆರೋಗ್ಯ ಸೇವಾ ವ್ಯವಸ್ಥೆಗಳನ್ನು ಅಧ್ಯಯನ ಮಾಡಿ, ಜಾಗತಿಕ ಮಟ್ಟದ ಬದಲಾವಣೆಗಳಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎನ್. ಶ್ರೀಹರ್ಷ ಮಾತನಾಡಿ, ಔಷಧ ಶಿಕ್ಷಣ ಕ್ಷೇತ್ರದಲ್ಲಿ 59 ವರ್ಷಗಳ ಶೈಕ್ಷಣಿಕ ಶ್ರೇಷ್ಠತೆಯ ಪರಂಪರೆಯನ್ನು ಕಾಲೇಜು ಹೊಂದಿದೆ. ಬದಲಾಗುತ್ತಿರುವ ಔಷಧೋದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಫಾರ್ಮಸಿಸ್ಟ್‌ಗಳ ಪಾತ್ರವೂ ವಿಸ್ತರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಔಷಧ ಶಿಕ್ಷಣದ ಜೊತೆಗೆ ಪ್ರಾಯೋಗಿಕ ಜ್ಞಾನ ಮತ್ತು ಅನ್ವಯಾಧಾರಿತ ವಿಷಯಗಳ ಬೋಧನೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕರಾದ ಎಂ.ಆರ್. ಸೀತಾಲಕ್ಷ್ಮೀ ಮಾತನಾಡಿದರು. ಉಪನ್ಯಾಸಕರಾದ ಶಿಫಾ ಮುಜೀದ್ ಮತ್ತು ಅಂಜಲಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *