ಮಂಜುನಾಥ್ ಶೆಟ್ಟಿ…

ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಆಶ್ರಯ ಮನೆಗಳ ವಿತರಣೆಗಾಗಿ ಆಗ್ರಹಿಸಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತ್ತು ಕೆ.ಇ. ಕಾಂತೇಶ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಕಚೇರಿ ಮುಂದೆ ಇಂದು ಬೃಹತ್ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದಾಗ ರಾಷ್ಟ್ರ ಭಕ್ತರ ಬಳಗದ ಕಾರ್ಯಕರ್ತರು ಮತ್ತು ಕೆ.ಇ. ಕಾಂತೇಶ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ಇದಕ್ಕೂ ಮುನ್ನ ಕಳೆದ 9 ವರ್ಷಗಳಿಂದ ಆಶ್ರಯ ಮನೆಗಾಗಿ ದುಡ್ಡು ಕಟ್ಟಿ ಇನ್ನೂ ಮನೆ ಸಿಗದೇ ಹತಾಶೆಯಿಂದ ನಿರ್ಲಕ್ಷö್ಯಕ್ಕೊಳಗಾದ ೨ ಸಾವಿರಕ್ಕೂ ಹೆಚ್ಚು ಸಂತ್ರಸ್ತರು ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಮಹಾನಗರ ಪಾಲಿಕೆವರೆಗೆ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದರು.

ಪಾಲಿಕೆ ಮುಂಭಾಗ ಸಂತ್ರಸ್ತರನ್ನುದ್ದೇಶಿಸಿ ಮಾತನಾಡಿದ ಕೆ.ಎಸ್. ಈಶ್ವರಪ್ಪ. ಇವತ್ತು ಕೂಲಿ ಕೆಲಸ ಬಿಟ್ಟು ಜೈಲಿಗೆ ಹೋಗಲು ಸಿದ್ಧರಾಗಿ ಹೋರಾಟಕ್ಕೆ ಬಂದಿದ್ದೀರಿ. ಹಣ ಕಟ್ಟಿ ೯ ವರ್ಷವಾದರೂ ಇದುವರೆಗೆ ಮನೆ ಕೀ ಕೊಟ್ಟಿರುವುದು ಕೇವಲ ೪೫೦ ಮನೆಗಳಿಗೆ ಮಾತ್ರ. 1200ಮನೆ ಅಲಾಟ್ ಮೆಂಟ್ ಆಗಿದೆ. ಆದರೂ ಇ-ಸ್ವತ್ತು ಆಗಿಲ್ಲ. ಬ್ಯಾಂಕ್ ಲೋನ್ ಆಗಿಲ್ಲ ಎಂದು ಸಬೂಬು ಹೇಳುತ್ತಾ ಮುಂದೂಡುತ್ತಾ ಬಂದಿದ್ದಾರೆ. ಗುತ್ತಿಗೆದಾರನಿಗೆ 15 ಕೋಟಿ ರೂ. ಬಾಕಿ ಉಳಿಸಿದ್ದರಿಂದ ಆತ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿ ಹೋಗಿದ್ದಾನೆ. ಮೂಲಭೂತ ಸೌಲಭ್ಯಗಳನ್ನೂ ಕಲ್ಪಿಸಿಲ್ಲ. ಕೇಂದ್ರ ಸರ್ಕಾರದ ಹಣ ಬಂದಿದ್ದು ಬೇರೆ ಉದ್ದೇಶಕ್ಕೆ ಬಳಸಿದ್ದಾರೆ. ಮುಖ್ಯಮಂತ್ರಿಗಳು ನಾವು ಭಾವನಾತ್ಮಕವಾಗಿ ಮಾತನಾಡಲ್ಲ, ಬದುಕಿಗಾಗಿ ಕೆಲಸ ಮಾಡುತ್ತೇವೆ ಎನ್ನುತ್ತಾರೆ. ಆದರೆ, ತಾಳಿ ಮಾರಿ ಮನೆಗೆ ೮೦ ಸಾವಿರ ರೂ. ಕಟ್ಟಿದ ಫಲಾನುಭವಿಗಳಿಗೆ 9 ವರ್ಷವಾದರೂ ಈ ಸರ್ಕಾರ ಸೂರು ಕಲ್ಪಿಸಿಲ್ಲ. ಸರ್ಕಾರ ಪಾಪರ್ ಎದ್ದಿದೆ. ನವೆಂಬರ್ 15ರಂದು ಎಲ್ಲಾ ಫಲಾನುಭವಿಗಳು ಮನೆಗೆ ಬನ್ನಿ. ಗೋವಿಂದಾಪುರಕ್ಕೆ ಭೇಟಿ ನೀಡಿ ಮತ್ತೊಮ್ಮೆ ಪರಿಶೀಲನೆ ಮಾಡಿ ಅಲ್ಲಿ ಕಾಮಗಾರಿ ಆಗಿಲ್ಲ ಎಂದಾದರೆ ಮತ್ತೆ ಹೋರಾಟ ಮುಂದುವರೆಸೋಣ ಎಂದರು.

ಕೆ ಇ ಕಾಂತೇಶ್ ಮಾತನಾಡಿ, ಆಶ್ರಯ ಮನೆಯನ್ನು ಬಡವರಿಗೆ ಮೊದಲು ನೀಡಿದ್ದೇ ಬಂಗಾರಪ್ಪನವರು. ಆದರೆ, ಅವರ ಪುತ್ರ, ಸಚಿವ ಮಧು ಬಂಗಾರಪ್ಪ 10 ವರ್ಷವಾದರೂ ಹಣ ಕಟ್ಟಿದ ಬಡವರಿಗೆ ಮನೆ ನೀಡಲು ವಿಫಲರಾಗಿದ್ದಾರೆ. ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಆಶ್ವಾಸನೆ ಕೊಟ್ಟು ನಾಪತ್ತೆ ಯಾಗಿದ್ದಾರೆ. ಸತ್ತಿದ್ದಾರೋ ಬದುಕಿದ್ದಾರೋ ಗೊತ್ತಿಲ್ಲ. ಪ್ರಾಣ ಹೋದರೂ ಚಿಂತೆ ಇಲ್ಲ, ಆಶ್ರಯ ಮನೆ ಬಡವರಿಗೆ ಹಂಚುವವರೆಗೆ ಬಿಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮಹಾಣಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾತನಾಡಿ, ಇ-ಸ್ವತ್ತು ಇಲ್ಲದೇ ಬ್ಯಾಂಕ್ ಲೋನ್ ಆಗದೇ ಇರುವ ಕಾರಣ ವಿಳಂಬವಾಗಿದೆ. ಗುತ್ತಿಗೆದಾರನೊಂದಿಗೆ ಮಾತನಾಡಿದ್ದೇವೆ. ಆತ ಈಗಾಗಲೇ ಕೆಲಸ ಶುರು ಮಾಡಿದ್ದಾನೆ. ಜನವರಿ ಅಂತ್ಯದೊಳಗೆ 600 ಮನೆ ಪೂರ್ಣಗೊಳ್ಳಲಿದ್ದು, ಮತ್ತೆ 3ತಿಂಗಳೊಳಗೆ ಮತ್ತೆ 600 ಮನೆ ಪೂರ್ತಿ ಆಗಲಿದೆ. ಮೂಲಭೂತ ಸೌಲಭ್ಯ ಶಾಶ್ವತ ವ್ಯವಸ್ಥೆ ಕೂಡ ಜನವರಿ ಅಂತ್ಯದೊಳಗೆ ಮುಗಿಯಲಿದೆ ನೀಡಿದರು.

ಆದರೆ, ಸಂತ್ರಸ್ತರು ಇದು ಸುಳ್ಳು ಭರವಸೆ, ಅಲ್ಲಿ ಯಾರೂ ಇದುವರೆಗೂ ಬಂದಿಲ್ಲ. ಗುತ್ತಿಗೆದಾರ ಊರು ಬಿಟ್ಟಿದ್ದಾರೆ. ಕಳೆದ ಎರಡು ವರ್ಷದಿಂದ ಇದೇ ರೀತಿ ಸುಳ್ಳು ಭರವಸೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫಲಾನುಭವಿಗಳು ಕೆಎಸ್‌ಈ ನೇತೃತ್ವದಲ್ಲಿ ಪಾಲಿಕೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು 8 ಕ್ಕೂ ಹೆಚ್ಚು ಪೊಲೀಸ್ ವಾಹನಗಳಲ್ಲಿ ತುಂಬಿ ಕರೆದೊಯ್ದರು. ಈ ಸಂದರ್ಭದಲ್ಲಿ ರಾಷ್ಟ್ರ ಭಕ್ತರ ಬಳಗ ಮತ್ತು ಆಶ್ರಯ ಸಂತ್ರಸ್ತರಲ್ಲಿ ಪ್ರಮುಖರಾದ ಸುವರ್ಣಾ ಶಂಕರ್, ಇ. ವಿಶ್ವಾಸ್, ಶಂಕರ್, ಕೆಂಪಮ್ಮ, ನಾಗವೇಣಿ, ಸೌಭಾಗ್ಯ, ಗೀತಾ, ಶಶಿಕಲಾ, ವನಜಾಕ್ಷಿ, ವರಲಕ್ಷ್ಮಿ, ರಾಜೇಶ್ವರಿ, ಕರಿಬಸಮ್ಮ, ರಶ್ಮಿ, ಪ್ರೇಮಾ ಚಂದ್ರಶೇಖರ್, ಶ್ರೀಕಾಂತ್, ಜಾಧವ್, ಬಾಲು, ರಾಜು, ಶಿವಾಜಿ ಮೊದಲಾದವರಿದ್ದರು.

Leave a Reply

Your email address will not be published. Required fields are marked *