ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮಲೆನಾಡಿನ ವಿಶಿಷ್ಟ ಜಾನಪದ ಕಲೆಯಾದ ಅಂಟಿಗೆ ಪಿಂಟಿಗೆ ಮತ್ತಷ್ಟು ಮೆರುಗು ನೀಡಿತು.
ಕರ್ನಾಟಕ ಜಾನಪದ ಪರಿಷತ್ತು, ಆದಿಚುಂಚನಗಿರಿ ‌ಮಹಾಸಂಸ್ಥಾನ ಮಠ ಹಾಗೂ ಜಿಲ್ಲಾ‌ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ಸಂಜೆ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ಅಂಟಿಗೆ ಪಿಂಟಿಗೆ ತಂಡಗಳು ಮನೆ-ಮನೆಗೆ ಜ್ಯೋತಿ ಬೆಳಗಿಸಿ, ದೀಪಾವಳಿಯ ಶುಭಾಶಯಗಳನ್ನು ಕೋರಿದವು.

ನಗರದ ಆದಿಚುಂಚನಗಿರಿ ಕಾಲಭೈರವೇಶ್ವರ ದೇವಸ್ಥಾನದಿಂದ ಸಂಜೆ ಹೊರಟ ತೀರ್ಥಹಳ್ಳಿಯ ಬಂದ್ಯಾ ಗ್ರಾಮದ ರಾಜ್ಯ ಪ್ರಶಸ್ತಿ ಪುರಸ್ಕೃತ ಎರಡು ಅಂಟಿಗೆ ಪಿಂಟಿಗೆ ತಂಡಗಳನ್ನು ವಿವಿಧ ಬಡಾವಣೆಗಳ ನಿವಾಸಿಗಳು ಸಂಭ್ರಮದಿಂದ ಬರಮಾಡಿಕೊಂಡರು. ನಗರದ ಸುಮಾರು 70ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದ ತಂಡಗಳು ಮಲೆನಾಡಿನ ಸಾಂಪ್ರದಾಯಿಕ ಜಾನಪದ ಹಾಡುಗಳ ಮೂಲಕ ಹಬ್ಬದ ಸಡಗರವನ್ನು ಹೆಚ್ಚಿಸಿದವು.

ಹಾದಿ ಪದದೊಂದಿಗೆ ಮನೆಗೆ ಬರುವ ತಂಡ, ಮನೆಯ ದ್ವಾರದ ಮುಂದೆ ನಿಂತು ಬಾಗಿಲು ಪದ ಹಾಡುತ್ತಾರೆ. ‘ಬಾಗಿಲು ಬಾಗಿಲು ಚೆಂದ ಬಾಗಿಲ ಗೆರೆ ಚೆಂದ ಬಾಗಲುಡಿದವರು, ಯಾರಯ್ಯ ಈ ಮನೆಯ ಮುತ್ತೂರ್ ಆಚಾರಿ.., ಮಗ ಬಂದು ಮಾಡಿದ ಕೆಲಸ ಕಿತ್ತಳೆ ಹಣ್ಣೇ ಸುಲಿದಂಗೆ’ ಎಂದು ಮನೆ ಮತ್ತು ಹೊಸಿಲಿನ ಸೌಂದರ್ಯ ವರ್ಣಿಸುತ್ತಾರೆ. ಈ ಪದಗಳ ಇಂಪಿಗೆ ಮನಸೋತ ಮನೆಯ ಹಿರಿಯರು, ಬಾಗಿಲು ತೆರೆದು ಜ್ಯೋತಿಯನ್ನು ಭಕ್ತಿಯಿಂದ ಬರಮಾಡಿಕೊಳ್ಳುತ್ತಾರೆ.

‘ದೀಪೋಳಿ ಎನ್ನಿರಣ್ಣಾ… ಈ ಊರ ದೇವ್ರಿಗೆ, ದೀಪೋಳಿಗೆ ಎನ್ನಿರೋ ಅಣ್ಣಾ ಬಲಿಂದ್ರ ರಾಯಗೆ…, ಅಣ್ಣಾ ಬಲಿಂದ್ರ ರಾಯಗೆ ಏನು ಎಲ್ಲಾ ಪೂಜೆಯೊ… ಹಾಲು ಹಣ್ಣಿನ ಪೂಜೆಯೊ’, ‘ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ಣೆಲಿ ಕಣ್ಣ ಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ’ ಎನ್ನುತ್ತಾ ಮನೆಮಂದಿಗೆ ಶುಭ ಹಾರೈಸುತ್ತಾರೆ.

ಅಂಟಿಗೆ ಪಿಂಟಿಗೆ ತಂಡದವರು ತರುವ ಪವಿತ್ರ ಜ್ಯೋತಿ ಮನೆ ಪ್ರವೇಶಿಸಿದಾಗ, ಮನೆಯವರು ಭಕ್ತಿಭಾವದಿಂದ ದೀಪಕ್ಕೆ ಎಣ್ಣೆ ಎರೆಯುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಈ ಜ್ಯೋತಿಯನ್ನು ಮನೆಗೆ ಬರಮಾಡಿಕೊಂಡು ಬೆಳಗಿಸುವುದರಿಂದ, ವರ್ಷವಿಡೀ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಹಾಗೂ ಕಷ್ಟಗಳು ದೂರವಾಗುತ್ತವೆ ಎಂಬ ಸಾಂಪ್ರದಾಯಿಕ ನಂಬಿಕೆ ಜನಮಾನಸದಲ್ಲಿದೆ.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಾದಮಯಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ, ಪದಾಧಿಕಾರಿಗಳಾದ ಭೈರಾಪುರ ಶಿವಪ್ಪ ಮೇಷ್ಟು, ಕೃಷ್ಣಮೂರ್ತಿ ಹಿಳ್ಳೋಡಿ, ನಾರಾಯಣ್, ಪಿ.ಕೆ. ಸತೀಶ್, ಡಿ.ಗಣೇಶ್, ಭಾರತಿ ರಾಮಕೃಷ್ಣ, ಶ್ರೀನಿವಾಸ ನಗಲಾಪುರ, ದೀಪಕ್ ಸಾಗರ, ಬಾಲರಾಜ್, ಅಮೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *