ಮಂಜುನಾಥ್ ಶೆಟ್ಟಿ…

ತೇಗ ಸಿರಿ ಯೋಜನೆ ಕೃಷಿಯೊಂದಿಗೆ ವೃಕ್ಷಸಂಪತ್ತನ್ನೂ ಬೆಳೆಸಿ, ರೈತರಿಗೆ ಭವಿಷ್ಯದಲ್ಲಿ ಆದಾಯದ ಮತ್ತೊಂದು ಮೂಲ ಸೃಷ್ಟಿಸುವ ಆಶಯವನ್ನು ಹೊಂದಿದ್ದು, ಬೆಳೆದ ಮರಗಳನ್ನು ಮಾರಾಟ ಮಾಡಿದಾಗ ದೊರೆಯುವ ಆದಾಯದಲ್ಲಿ ಶೇ.70ರಷ್ಟು ರೈತರಿಗೆ ಹಾಗೂ ಶೇ.30ರಷ್ಟು ಸರ್ಕಾರಕ್ಕೆ ಹಂಚಿಕೆ ಮಾಡುವ ಯೋಜನೆ ಇದಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ ಶ್ರಮಿಸುವಂತೆ ಜಿಲ್ಲಾಧಿಕಾರಿ ಪ್ರಕಾಶ್‌ಜಿ.ಟಿ.ನಿಟ್ಟಾಲಿ ಅವರು ಹೇಳಿದರು.


ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ತೇಗಸಿರಿ ಯೋಜನೆ ಅನುಷ್ಠಾನದ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅ‍ಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರೈತರು ತಮ್ಮ ಜಮೀನಿನ ರಸ್ತೆ ಬದಿ ಹಾಗೂ ಸೂಕ್ತ ಖಾಲಿ ಜಾಗಗಳಲ್ಲಿ ತೇಗದ ಸಸಿಗಳನ್ನು ನೆಟ್ಟು, ಸುಮಾರು 10ರಿಂದ 15 ವರ್ಷಗಳ ಕಾಲ ಅವುಗಳನ್ನು ಪೋಷಿಸಿ ಸಂರಕ್ಷಿಸಬೇಕು ಎಂದರು.
ಈ ಯೋಜನೆಯ ವ್ಯವಸ್ಥಿತ ಅನುಷ್ಠಾನದಿಂದ ಜಮೀನಿನ ಬಳಕೆಯಾಗದ ಜಾಗದ ಸದ್ಬಳಕೆಯಾಗುವುದರ ಜೊತೆಗೆ ದೀರ್ಘಾವಧಿಯಲ್ಲಿ ಹೆಚ್ಚುವರಿ ಆದಾಯ ಪಡೆಯಲು ಅವಕಾಶ ದೊರೆಯಲಿದೆ. ಭವಿಷ್ಯದಲ್ಲಿ ಮರದ ಸಂಪತ್ತು ಹೆಚ್ಚಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಉತ್ತೇಜನವಾಗಲಿದೆ. ಆಧ್ದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದ ಜಾಗದಲ್ಲಿ ತೇಗದ ಮರಗಳನ್ನು ಬೆಳೆಸಬಹುದಾಗಿದೆ ಎಂದರು.


ಯೋಜನೆಯ ಅನುಷ್ಠಾನಕ್ಕೆ ಪೂರ್ವದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯಾಧಿಕಾರಿಗಳು ಯೋಜನೆಯ ವ್ಯವಸ್ಥಿತ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಕಾಮಗಾರಿ ಕೈಗೊಳ್ಳಬೇಕಾದ ಪ್ರದೇಶ, ಅಗತ್ಯವಾಗುವ ಗಿಡಗಳು ಮತ್ತಿತರ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ಉಪಸ್ಥಿತರಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಅವರು ಮಾತನಾಡಿ, ತೇಗಸಿರಿ ಯೋಜನೆಯ ಅನುಷ್ಠಾನದಲ್ಲಿ ಕಂದಾಯ ಇಲಾಖೆ, ಜಿಲ್ಲಾ ಪಂಚಾಯತ್‌ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಈ ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದವರು ನುಡಿದರು.


ಅರಣ್ಯ ಪ್ರದೇಶಗಳ ಸಂರಕ್ಷಣೆ, ನಿರ್ವಹಣೆ ಹಾಗೂ ಅರಣ್ಯ ಭೂಮಿಗೆ ಸಂಬಂಧಿಸಿದ ಆಡಳಿತಾತ್ಮಕ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಪರಿಹರಿಸುವ ಉದ್ದೇಶದಿಂದಾಗಿ ಸರ್ಕಾರವು ಅರಣ್ಯ ಭೂಮಿಗಳ ಕ್ರೋಢೀಕರಣ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಯಲ್ಲಿ ಬಹುಮುಖ್ಯವಾಗಿ ಅರಣ್ಯ ಭೂಮಿಗಳ ಸರ್ವೆ, ಗಡಿ ಗುರುತಿಸುವಿಕೆ, ದಾಖಲೆಗಳ ಪರಿಶೀಲನೆ, ಒತ್ತುವರಿ ತೆರವು ಮತ್ತು ಅರಣ್ಯ ಪ್ರದೇಶಗಳ ಸಂರಕ್ಷಣೆಯ ಅಂಶಗಳಿಗೆ ಮಹತ್ವ ನೀಡಲಾಗುತ್ತಿದೆ ಎಂದರು.


ಅರಣ್ಯ ಇಲಾಖೆಯಲ್ಲಿರುವ ಭೂ ದಾಖಲೆಗಳನ್ನು ಮತ್ತು ಕಂದಾಯ ಇಲಾಖೆಯ ದಾಖಲೆಗಳನ್ನು ಒಗ್ಗೂಡಿಸಿ ಸಮೀಕ್ಷೆ ನಡೆಸುವುದು, ಆ ಮೂಲಕ ಮೀಸಲು ಅರಣ್ಯ, ಸಂರಕ್ಷಿತ ಅರಣ್ಯ ಹಾಗೂ ಡೀಮ್ಡ್ ಫಾರೆಸ್ಟ್ ಪ್ರದೇಶಗಳನ್ನು ಗುರುತಿಸುವುದು, ಅರಣ್ಯ ಮತ್ತು ಕಂದಾಯ ಭೂಮಿಗಳ ನಡುವಿನ ಗಡಿ ವಿವಾದಗಳನ್ನು ಪರಿಹರಿಸಲು ದಾಖಲೆ ಸಿದ್ಧಪಡಿಸುವಲ್ಲಿ ಗಮನಹರಿಸುವುದು ಈ ಯೋಜನೆಯಿಂದಾಗಿ ಸಾಧ್ಯವಾಗಲಿದೆ ಎಂದ ಅವರು, ಅರಣ್ಯ ಭೂಮಿಗಳ ನಿಖರ ವಿಸ್ತೀರ್ಣವನ್ನು ಸರ್ವೆ ಮೂಲಕ ದೃಢೀಕರಿಸುವುದಲ್ಲದೆ ಅರಣ್ಯಭೂಮಿ ಒತ್ತುವರಿ ಹಾಗೂ ಅತಿಕ್ರಮಣದ ಕುರಿತು ಸ್ಪಷ್ಟ ಮಾಹಿತಿ ಸಂಗ್ರಹಿಸಿ, ಅರಣ್ಯ ಭೂಮಿಗೆ ಸಂಬಂಧಿಸಿದ ಹಳೆಯ ದಾಖಲೆಗಳಲ್ಲಿನ ಗೊಂದಲಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಲಿದೆ ಎಂದರು.


ಪ್ರಸ್ತುತ ಸಂದರ್ಭದಲ್ಲಿ ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ಅರಣ್ಯವೆಂದು ಘೋಷಿಸದಿದ್ದರೂ, ವಾಸ್ತವದಲ್ಲಿ ಅರಣ್ಯದ ಸ್ವರೂಪ ಮತ್ತು ಗುಣಲಕ್ಷಣಗಳನ್ನು ಹೊಂದಿರುವ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಎಂದೇ ಗುರುತಿಸಲಾಗುತ್ತಿದೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆ. ಭೂಮಿಯ ದಾಖಲೆಗಳ ಪರಿಶೀಲನೆ. ಜಿಪಿಎಸ್ ಮತ್ತು ಸರ್ವೆ ಮೂಲಕ ಗಡಿ ಗುರುತಿಸುವಿಕೆ. ಗ್ರಾಮವಾರು ಹಾಗೂ ತಾಲೂಕುವಾರು ದಾಖಲೆಗಳ ಕ್ರೋಢೀಕರಣ. ಜಿಲ್ಲಾಮಟ್ಟದ ಸಮಿತಿಗಳ ಮೂಲಕ ಪರಿಶೀಲನೆ ನಡೆಸಲಾಗುವುದು ಎಂದ ಅವರು, ತಾಲೂಕು ಮಟ್ಟದ ಅಧಿಕಾರಿಗಳು ಸರ್ವೆ ಮತ್ತು ದಾಖಲೀಕರಣ ನಡೆಸುವ ಕಾರ್ಯಕ್ಕೆ ಸಹಕರಿಸುವಂತೆ ಅವರು ಮನವಿ ಮಾಡಿದರು.


ರೈತರ ಭೂ ದಾಖಲೆಗಳಲ್ಲಿನ ಗೊಂದಲ ನಿವಾರಣೆಗೆ, ಅರಣ್ಯ ಮತ್ತು ಕಂದಾಯ ಭೂಮಿಗಳ ಸ್ಪಷ್ಟ ಗಡಿ ಗುರುತಿಸಲು ಹಾಗೂ ನೈಜ ಅರಣ್ಯ ಪ್ರದೇಶಗಳ ಸಂರಕ್ಷಣೆಗೆ ಈ ಯೋಜನೆ ಸಹಕಾರಿಯಾಗಲಿದೆ ಎಂಬ ಆಶಯ ತಮಗಿರುವುದಾಗಿ ತಿಳಿಸಿದ ಅವರು, ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಗಳ ಗಡಿ, ಡೀಮ್ಡ್ ಫಾರೆಸ್ಟ್ ವರ್ಗೀಕರಣ, ಹಳೆಯ ಸಾಗುವಳಿ ಜಮೀನುಗಳು ಹಾಗೂ ಒತ್ತುವರಿ ವಿಚಾರಗಳನ್ನು ಇತ್ಯರ್ಥಪಡಿಸುವಲ್ಲಿ ಸಹಕಾರಿಯಾಗಲಿದೆ ಎಂದರು.


ವಿಶೇಷ ತನಿಖಾ ತಂಡದ ರಚನೆ ಮತ್ತು ಅರಣ್ಯ ಭೂಮಿ ಹಂಚಿಕೆಗಳ ಪರಿಶೀಲನಾ ಅಭಿಯಾನ. SIT (Special Investigation Team)
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅರಣ್ಯ ಭೂಮಿಗಳ ದಾಖಲೆ ಮತ್ತು ಅಕ್ರಮ ಹಂಚಿಕೆಗಳನ್ನು ಪರಿಶೀಲಿಸಲು ಸರ್ಕಾರ ಕೈಗೊಂಡಿರುವ ವಿಶೇಷ ತನಿಖಾ ಪ್ರಕ್ರಿಯೆ ಇದಾಗಿದೆ. ಅರಣ್ಯ ಇಲಾಖೆಯ ಹೆಸರಿನಲ್ಲಿ ಅಧಿಸೂಚಿತವಾಗಿರುವ ಭೂಮಿಗಳು ಕಂದಾಯ ಇಲಾಖೆಯ ವಶದಲ್ಲಿವೆಯೇ ಮತ್ತು ಅವುಗಳನ್ನು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಅರಣ್ಯೇತರ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಅವರು ಹೇಳಿದರು.


ಈ ಅಭಿಯಾದ ಮೇಲುಸ್ತುವಾರಿಗಾಗಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಅಭಿಯಾನದಲ್ಲಿ ಪ್ರಮುಖವಾಗಿ ಅಧಿಸೂಚಿತ ಅರಣ್ಯ ಭೂಮಿಗಳ ದಾಖಲೆಗಳು, ಕಂದಾಯ ಇಲಾಖೆಯ ವಶದಲ್ಲಿರುವ ಅರಣ್ಯ ಭೂಮಿ, ಖಾಸಗಿ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡಿರುವ ಅರಣ್ಯ ಭೂಮಿ ಮಂಜೂರಾತಿ, ಮಂಜೂರಾತಿ ಆದೇಶಗಳ ಕಾನೂನುಬದ್ಧವಾಗಿರುವ ಬಗ್ಗೆ ಹಾಗೂ ಅರಣ್ಯ ಭೂಮಿಗಳ ಖಾತೆ ಬದಲಾವಣೆ ಆಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯಲಿದೆ ಎಂದರು.
ರೈತರ ಜಮೀನುಗಳನ್ನು ತಕ್ಷಣ ವಶಪಡಿಸಿಕೊಳ್ಳುವುದು ಈ ಯೋಜನೆಯ ಉದ್ದೇಶವಲ್ಲ. ಪ್ರತಿಯೊಂದು ಜಮೀನಿನ ಮಂಜೂರಾತಿ ಆದೇಶ, ಅಧಿಸೂಚನೆ ಮತ್ತು ಕಾನೂನುಬದ್ಧ ದಾಖಲೆಗಳನ್ನು ಈ ಯೋಜನೆಯಡಿ ಪರಿಶೀಲಿಸಲಾಗುತ್ತದೆ.

ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಮಂಜೂರು ಮಾಡಿರುವುದು ಕಂಡುಬಂದರೆ ಕಾನೂನು ಪ್ರಕಾರ ಕ್ರಮಕ್ಕೆ ಶಿಫಾರಸು ಮಾಡಲು ಅವಕಾಶವಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್‌ ಸೇರಿದಂತೆ ಅರಣ್ಯ, ಕಂದಾಯ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *