ಮಂಜುನಾಥ್ ಶೆಟ್ಟಿ…
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿ ಕುಟುಂಬದ ಮೌಲ್ಯಗಳು, ಸಾಮಾಜಿಕ ಕಳಕಳಿ, ಸಂಸ್ಕಾರ ಮತ್ತು ದೇಶಾಭಿಮಾನವನ್ನು ಬೆಳೆಸುವುದು ಇಂದಿನ ಶಿಕ್ಷಣ ವ್ಯವಸ್ಥೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಉಷಾ ನರ್ಸಿಂಗ್ ಹೋಮ್ನ ಕನ್ಸಲ್ಟೆಂಟ್ ಫಿಸಿಷಿಯನ್ ಡಾ. ಸುಧೀಂದ್ರ ಬಿ.ಆರ್. ಅಭಿಪ್ರಾಯಪಟ್ಟರು.
ನಗರದ ಪ್ರಜ್ಞಾ ಎಜುಕೇಶನ್ ಟ್ರಸ್ಟ್ (ರಿ.) ವತಿಯಿಂದ ಪೇಸ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಪೋಷಕರ
ಹಾಗೂ ಅಜ್ಜ-ಅಜ್ಜಿಯರ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರಂಭ ‘ಸಮನ್ವಯ – ಕಲೆ, ಸಂಸ್ಕೃತಿ ಮತ್ತು ಸೌಹಾರ್ದದ ಸಮ್ಮಿಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿ ವೈದ್ಯರು, ಇಂಜಿನಿಯರ್ಗಳು ಹಾಗೂ ಉನ್ನತ ಅಧಿಕಾರಿಗಳಾಗುವುದು ಮುಖ್ಯ. ಆದರೆ ಶಿಕ್ಷಣ ಕೇವಲ ಅಂಕ ಮತ್ತು ಪದವಿಗಳಿಗೆ ಸೀಮಿತವಾಗಬಾರದು. ಉತ್ತಮ ವ್ಯಕ್ತಿತ್ವ, ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯೂ ಮಕ್ಕಳಲ್ಲಿ ಬೆಳೆಯಬೇಕು ಎಂದರು.
ಇಂದಿನ ಮಕ್ಕಳು ಶಾಲೆ, ಕಾಲೇಜು ಮತ್ತು ಹೊರಗಿನ ಪ್ರಪಂಚದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದರಿಂದ ಕುಟುಂಬದ ಮಾರ್ಗದರ್ಶನ ಹಾಗೂ ಹಿರಿಯರ ಪ್ರಭಾವ ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಕುಟುಂಬ, ಸಮಾಜ, ರಾಜ್ಯ ಮತ್ತು ದೇಶದ ಮಹತ್ವವನ್ನು ತಿಳಿಸಿಕೊಡಬೇಕು. ವಿದೇಶಗಳಿಗೆ ಹೋಗಿ ಉನ್ನತ ಶಿಕ್ಷಣ ಪಡೆಯುವುದು ಹಾಗೂ ಉದ್ಯೋಗ ಮಾಡುವುದು ತಪ್ಪಲ್ಲ. ಆದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ನೆಲೆಸಿದರೂ ನನ್ನ ದೇಶ, ನನ್ನ ರಾಜ್ಯ, ನನ್ನ ಭಾಷೆ ಮತ್ತು ನನ್ನ ಸಂಸ್ಕೃತಿ ಎಂಬ ಹೆಮ್ಮೆ ಮಕ್ಕಳಲ್ಲಿ ಇರಬೇಕು ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಸಮಸ್ಯೆಗಳಿವೆ ಎಂದು ದೇಶದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಾರದು. ನಮ್ಮ ಮನೆಯ ಸಮಸ್ಯೆಗಳನ್ನು ನಾವೇ ಸರಿಪಡಿಸಿಕೊಳ್ಳುವಂತೆ ದೇಶದ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯೂ ನಮ್ಮದೇ ಎಂಬ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಬೇಕು. ದೇಶದ ಬಗ್ಗೆ ಪ್ರೀತಿ, ಗೌರವ ಮತ್ತು ಜವಾಬ್ದಾರಿಯನ್ನು ಮೂಡಿಸುವುದು ಶಿಕ್ಷಣದ ಉದ್ದೇಶವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ಪ್ರಜ್ಞಾ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪ ಮಾತನಾಡಿ, ಪೇಸ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಶಿವಮೊಗ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಹಾಗೂ CET ಮತ್ತು NEET ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ಉನ್ನತ ಸ್ಥಾನಗಳನ್ನು ಪಡೆಯುವ ಅವಕಾಶ ಕಲ್ಪಿಸಬೇಕು ಎಂಬ ದೂರದೃಷ್ಟಿಯ ಆಶಯ ಹೊಂದಲಾಗಿತ್ತು. ಆ ಕನಸಿನೊಂದಿಗೆ ಸಂಸ್ಥೆಯನ್ನು ಬೆಳೆಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ ಎಂದರು.
ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಆದ್ಯತೆ ನೀಡಬೇಕು. ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ತಂಡದ ಮನೋಭಾವ ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸುತ್ತವೆ. ಆದ್ದರಿಂದ ಪೋಷಕರು ಮಕ್ಕಳನ್ನು ಕೇವಲ ಓದಿಗೆ ಸೀಮಿತಗೊಳಿಸದೆ ಅವರ ಆಸಕ್ತಿ ಮತ್ತು ಪ್ರತಿಭೆಗೆ ಅನುಗುಣವಾಗಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪೇಸ್ ಯುಎಂ ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಡಾ. ಸುಧೀಂದ್ರ ಬಿ.ಆರ್. ಅವರ ಸಾಧನೆಯನ್ನು ಶ್ಲಾಘಿಸಿದರು. ಇದೇ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ವೈದ್ಯರಾಗಿ ಬೆಳೆದು, ಇಂದು ಉಷಾ ನರ್ಸಿಂಗ್ ಹೋಮ್ನಲ್ಲಿ ಕನ್ಸಲ್ಟೆಂಟ್ ಫಿಸಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಅವರು ತಮ್ಮ ವಿದ್ಯಾಭ್ಯಾಸದ ಸಂಸ್ಥೆಗೆ ಮರಳಿ ಬಂದು ಕಾರ್ಯಕ್ರಮ ಉದ್ಘಾಟಿಸಿರುವುದು ಹೆಮ್ಮೆಯ ಸಂಗತಿ. ಅವರ ಸಾಧನೆ ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ಮುಂದಿನ ದಿನಗಳಲ್ಲಿ ಪೇಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕೂಡ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಆಶಿಸಿದರು.
‘ಸಮನ್ವಯ’ ಕಾರ್ಯಕ್ರಮದ ವಿಶೇಷತೆಯಾಗಿ ಶಾಲಾ ಆವರಣದಲ್ಲಿ ಪೋಷಕರು ಹಾಗೂ ಅಜ್ಜ-ಅಜ್ಜಿಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪೋಷಕರು ಮತ್ತು ಹಿರಿಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲೆ, ಸಂಸ್ಕೃತಿ ಮತ್ತು ಕುಟುಂಬದ ಬಾಂಧವ್ಯದ ಸೊಬಗನ್ನು ಅನಾವರಣಗೊಳಿಸಿದವುಶಾಲೆ ಮತ್ತು ಪೋಷಕರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ ಮಕ್ಕಳಿಗೆ ಹಿರಿಯರ ಪ್ರೀತಿ, ಅನುಭವ ಮತ್ತು ಆಶೀರ್ವಾದದ ಮಹತ್ವವನ್ನು ತಿಳಿಸುವ ಅರ್ಥಪೂರ್ಣ ವೇದಿಕೆಯಾಗಿ ಕಾರ್ಯಕ್ರಮ ಮೂಡಿಬಂದಿತು.
ಕಾರ್ಯಕ್ರಮದಲ್ಲಿ ಪ್ರಜ್ಞಾ ಎಜುಕೇಶನ್ ಟ್ರಸ್ಟ್ನ ಉಪಾಧ್ಯಕ್ಷರಾದ ಶ್ರೀ ಆನಂದ್, ಕಾರ್ಯದರ್ಶಿಗಳಾದ ಶ್ರೀ ಬಿ.ಎನ್. ವಿಶ್ವನಾಥಯ್ಯ, ಖಜಾಂಚಿಗಳಾದ ಶ್ರೀ ಕೆ.ಇ. ಕಾಂತೇಶ್, ಶ್ರೀಗಂಧ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಉಮೇಶ್ ಆರಾಧ್ಯ, ಶಾಲೆಯ ಸಂಯೋಜಕರಾದ ಶ್ರೀಮತಿ ಶುಭ, ಶ್ರೀಮತಿ ಜಯಲಕ್ಷ್ಮಿ ಈಶ್ವರಪ್ಪ ಹಾಗೂ ಶ್ರೀಮತಿ ಶಾಲಿನಿ ಕಾಂತೇಶ್ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಶ್ರೀಮತಿ ಶ್ರೀರಂಜನಿ ದತ್ತಾತ್ರಿ, ಶ್ರೀಮತಿ ಶೀಲಾ ಸುರೇಶ್, ಶ್ರೀಮತಿ ಶುಭ ರಾಘವೇಂದ್ರ, ಶ್ರೀಮತಿ ಸುಜಾತ ಪರಮೇಶ್ವರ್, ಶ್ರೀಮತಿ ಉಷಾ ಅಡಿಗ ಹಾಗೂ ಶ್ರೀಮತಿ ಸುಲೋಚನಾ ಮೂರ್ತಿ ಸಹಕರಿಸಿದರು.
ಶ್ರೀಮತಿ ವಿದ್ಯಾ, ಶ್ರೀಮತಿ ನವನೀತ ಹಾಗೂ ಶ್ರೀ ಶಬರೀಶ್ ಕಣ್ಣನ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾಲೆಯ ಪ್ರಾಂಶುಪಾಲರಾದ ಶ್ರೀ ಪವನ್ ಕುಮಾರ್ ಎನ್.ಆರ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು. ವಿಭಾಗ ಮುಖ್ಯಸ್ಥರಾದ ಶ್ರೀಮತಿ ಪರಿಮಳ ಕುಲಕರ್ಣಿ ವಂದನಾರ್ಪಣೆ ಸಲ್ಲಿಸಿದರು.



