ರಿಪ್ಪನ್ ಪೇಟೆ : ಕರ್ನಾಟಕದ ಮೇರುನಟ ಕರ್ನಾಟಕರತ್ನ ಪುನೀತ್ ರಾಜ್ ಕುಮಾರ್ ರವರ ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಪೊಲೀಸ್ ಇಲಾಖೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ಪಟ್ಟಣದ ವಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಪುನೀತ್ ರಾಜ್ ಕುಮಾರ್ ರವರ ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಪೊಲೀಸ್ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶಿವು ಸೂಡೂರು ಪುನೀತ್ ರಾಜ್‍ಕುಮಾರ್ ರವರು ‘ಯಾರಿಗೂ ತಿಳಿಯದ ಹಾಗೇ ಅವರು ಮಾಡಿರುವ ಸಮಾಜ ಸೇವೆ ನಿಜಕ್ಕೂ ಅವಿಸ್ಮರಣೀಯ. ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು ಹಾಗೂ ಸಾಮಾನ್ಯರಾದ ನಾವು ಅವರ ಜೀವನ ತತ್ವವನ್ನು ಅಳವಡಿಸಿಕೊಳ್ಳಬೇಕಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಆಕಾಶದೆತ್ತರಕ್ಕೆ ಬೆಳೆದಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪುನೀತ್ ಅವರನ್ನು ಜೀವಂತವಾಗಿರಿಸಲು ಪ್ರಯತ್ನಿಸಬೇಕು’ ಅದನ್ನು ಹೊರತುಪಡಿಸಿ ಅವರಲ್ಲಿ ಜಾತಿಯನ್ನು ಹುಡುಕಿ ಅವರ ನಾಮಫಲಕಕ್ಕೆ ಬಣ್ಣ ಬಳಿಯುವುದು ಹೇಡಿತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹೊಸನಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಉಲ್ಲಾಸ್,ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ,ಬುಕ್ಕಿವರೆ ಮಹೇಂದ್ರ,ಭರಮಣ್ಣ ಮಂಡಘಟ್ಟ , ಪ್ರವೀಣ್ ಲಕ್ಷ್ಮಿಕಾಂತ್ ,ವಿನಾಯಕ ಶೆಟ್ಟಿ,ಪಿಯೂಸ್ ರೊಡ್ರಿಗಸ್,ಶ್ರೀಧರ್,ರಾಘವೇಂದ್ರ,ವಿಜಯ್ ಈಡಿಗ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ವರದಿ ರಫಿ ರಿಪ್ಪನ್ ಪೇಟೆ…