ಉಭಯ ಕಕ್ಷಿದಾರರ ಸಮಯ, ಹಣ ಮತ್ತು ಸಂಬಂಧಗಳನ್ನು ಉಳಿಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಲೋಕ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ತಿಳಿಸಿದರು.
ರಾಷ್ಟ್ರೀಯ ಲೋಕ ಅದಾಲತ್ ಕುರಿತು ಮಾಹಿತಿ ನೀಡಲು ಇಂದು ಜಿಲ್ಲಾ ನ್ಯಾಯಾಲದಯಲ್ಲಿ ಕರೆಯಲಾಗಿದ್ದ ಪತ್ರಿಕಾಗೊಷ್ಟಿಯನ್ನುದ್ದೇಶಿ ಮಾತನಾಡಿದ ಅವರು ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ನವೆಂಬರ್ 12 ರ ಶನಿವಾರದಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಕ್ಷಿದಾರರು ಇದರ ಸದುಪಯೋಗ ಪಡೆಯಬೇಕೆಂದರು.
ಈ ಲೋಕ ಅದಾಲತ್‍ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಸಿವಿಲ್, ವೈವಾಹಿಕ(ವಿಚ್ಚೇದನ ಹೊರತುಪಡಿಸಿ), ಮೋಟಾರು ಪರಿಹಾರ ಪ್ರಕರಣಗಳು, ಚೆಕ್‍ಬೌನ್ಸ್, ರಾಜೀಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗೂ ಕಲಂ 6 ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದಂತೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ವಿನೀತ ಶರ್ಮ ವಿರುದ್ದ ರಾಕೇಶ್ ಶರ್ಮ ಮತ್ತು ಇತರರು ಪ್ರಕರಣದಲ್ಲಿ ದಿ: 11.08.2020 ರಂದು ನೀಡಿರುವ ತೀರ್ಪಿನನ್ವಯ ಹೆಣ್ಣು ಮಕ್ಕಳಿಗೂ ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಕುರಿತು, ವಿಭಜನಾ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳನ್ನು ಗುರುತಿಸಿ, ಸದರಿ ಪ್ರಕರಣಗಳ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ಅವರ ಒಪ್ಪಿಗೆ ಪ್ರಕಾರ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು.
ಇದೂ ಅಲ್ಲದೇ ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು, ವಿದ್ಯುಚ್ಚಕ್ತಿ, ಜಲಮಂಡಳಿ ಹಾಗೂ ನ್ಯಾಯಾಲಯಕ್ಕೆ ಬರಬಹುದಾದಂತಹ ಇತರೆ ಯಾವುದೇ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಿ, ಅವುಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ರಾಜೀ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ಅವಾರ್ಡ್ ಪಾಸು ಮಾಡಲಾಗುವುದು.
ಈ ಅವಾರ್ಡ್ ನ್ಯಾಯಾಲಯದಲ್ಲಿ ಮಾಡಬಹುದಾದ ಡಿಕ್ರಿ ಇದ್ದಂತೆ ಆಗುತ್ತಿದ್ದು, ಅಂತಹ ಅವಾರ್ಡ್‍ಗಳನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳಲ್ಲಿ ಅಮಲ್‍ಬಜಾವಣೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಹಾಗೂ ಅವರ ಅಮೂಲ್ಯ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಶೀಘ್ರವಾಗಿ ನ್ಯಾಯದಾನವಾಗುತ್ತದೆ. ಆದ್ದರಿಂದ ಜನತೆ ಇಂತಹ ಪ್ರಕ್ರಿಯೆ ಉಪಯೋಗವನ್ನು ಪಡೆಯಬೇಕು. ಪ್ರಕರಣಗಳನ್ನು ರಾಜೀ ಸಂಧಾನಕ್ಕಾಗಿ ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
ಕಳೆದ ಲೋಕ ಅದಾಲತ್ ನಲ್ಲಿ ಒಟ್ಟು 26637 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು. ನಿನ್ನೆವರೆಗೆ 5785 ಪ್ರಕರಣಗಳನ್ನು ಗುರುತಿಸಲಾಗಿದೆ. ನ.10 ರ ವರೆಗೆ ರಾಜೀ ಸಂಧಾನಕ್ಕೆ ಪ್ರಕರಣಗಳನ್ನು ಗುರುತಿಸಲಾಗುವುದು. ಇಲ್ಲಿ ಇತ್ಯರ್ಥವಾಗುವ ಪ್ರಕರಣಗಳು ಅಂತಿಮವಾಗಿದ್ದು, ಮೇಲ್ಮನವಿಗೆ ಅವಕಾಶವಿಲ್ಲ. ಹಾಗೂ ಉಭಯ ಕಕ್ಷಿದಾರರ ನಡುವಿನ ಸಂಬಂಧ ಸಹ ಸೌಹಾರ್ಧಯುತವಾಗಿದ್ದು, ಕೋರ್ಟ್ ಕಲಾಪ ಮತ್ತು ಕಕ್ಷಿದಾರರ ಸಮಯ ಉಳಿತಾಯದೊಂದಿಗೆ, ಸಂಪೂರ್ಣ ಶುಲ್ಕ ವಾಪಸ್ ನೀಡುವುದರಿಂದ ಹಣ ಕೂಡ ಉಳಿತಾಯ ಆಗುತ್ತದೆ, ಆದ್ದರಿಂದ ಜನರು ಲೋಕಅದಾಲತ್‍ನ ಉಪಯೋಗ ಪಡೆಯಬೇಕೆಂದು ಕರೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯಕರ್ಶಿ ರಾಜಣ್ಣ ಸಂಕಣ್ಣನವರ್ ಹಾಜರಿದ್ದರು.