ಮಂಜುನಾಥ್ ಶೆಟ್ಟಿ…
ಕುಷ್ಟರೋಗದ ಬಗ್ಗೆ ಇರುವ ಕಳಂಕ-ಮೌಢ್ಯವನ್ನು ದೂರ ಮಾಡಿ ಕುಷ್ಟರೋಗಿಗಳನ್ನು ಘನತೆಯಿಂದ ಕಾಣಬೇಕು. ಹಾಗೂ ಕುಷ್ಟರೋಗದ ಕುರಿತು ಸಮಾಜದಲ್ಲಿ ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಅಧಿಕಾರಿಗಳಿಗೆ ತಿಳಿಸಿದರು.
‘ಸ್ಪರ್ಶ್’ ಕುಷ್ಟರೋಗ ಜಾಗೃತಿ ಆಂದೋಲನ – 2026 ರ ಅಂಗವಾಗಿ ಜನವರಿ 30 ರಿಂದ ಫೆಬ್ರವರಿ 13 ರವರೆ ನಡೆಯುವ ಆಂದೋಲನದ ಕುರಿತು ಚರ್ಚಿಸಲು ಗುರುವಾರ ಜಿಲ್ಲಾಡಳಿತ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಷ್ಟರೋಗ ಸಂಪೂರ್ಣವಾಗಿ ನಾಶವಾಗಿಲ್ಲ. ಆದ್ದರಿಂದ ಕುಷ್ಟರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಅವಶ್ಯವಾಗಿದೆ. ಸೂಕ್ತ ಚಿಕಿತ್ಸೆಯಿಂದ ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಅವರನ್ನು ತಾರತಮ್ಯದಿಂದ ನೋಡುವುದು, ಕಳಂಕ ಎಂದು ಭಾವಿಸುವುದನ್ನು ಬಿಟ್ಟು ಘನತೆಯಿಂದ ನಡೆಸಿಕೊಳ್ಳಬೇಕು ಜೊತೆಗೆ ಸೂಕ್ತ ಚಿಕಿತ್ಸೆಗೊಳಿಸಬೇಕೆಂಬ ಉದ್ದೇಶದಿಂದ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ.
ಕುಷ್ಟರೋಗ ಪತ್ತೆ ಮತ್ತು ಚಿಕತ್ಸೆ ಕುರಿತು ಅರಿವು ಮೂಡಿಸಲು ಮುಖ್ಯವಾಗಿ ಸ್ಲಂಗಳಲ್ಲಿ, ವಲಸಿಗರು ವಾಸಿಸುವ ಸ್ಥಳದಲ್ಲಿ ಅರಿವು ಮೂಡಿಸಬೇಕು. ಕುಷ್ಟರೋಗ ವಾಸಿಯಾದ ವ್ಯಕ್ತಿಗಳಿಂದ ಅರಿವು ಮೂಡಿಸುವ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಹಾಗೂ ಗ್ರಾಮ ಪಂಚಾಯ್ತಿ, ತಾ.ಪಂ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಜಾಥಾಗಳು, ಮೈಕ್ ಘೋಷಣೆಗಳನ್ನು ಮಾಡಬೇಕು. ಶಾಲಾ-ಕಾಲೇಜುಗಳ ಪ್ರಾರ್ಥನೆ ವೇಳೆ ಅರಿವು ಮೂಡಿಸಬೇಕು. ಹೈರಿಸ್ಕ್ ಗುಂಪುಗಳಿಗೆ ಅರಿವು ಮೂಡಿಸುವುದು ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಹಾಗೂ ಮಾಧ್ಯಮಗಳ ಮೂಲಕ ಪ್ರಚಾರ ನೀಡಬೇಕೆಂದರು.
ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಾಹಿತಿ ಪಡೆದು ರೋಗಿಗಳನ್ನು ಪತ್ತೆ ಹಚ್ಚಿ, ರೋಗದ ಲಕ್ಷಣಗಳಿರುವ ವ್ಯಕ್ತಿಗಳು ಕಂಡುಬAದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಎನ್‌ಜಿಓ ಗಳ ಸಹಯೋಗದೊಂದಿಗೆ ದೊಡ್ಡ ಮಟ್ಟದಲ್ಲಿ ಮತ್ತು ಪರಿಣಾಮಕಾರಿಯಾಗಿ ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಕುಷ್ಟರೋಗ ಗೆದ್ದ ವ್ಯಕ್ತಿಗಳನ್ನು ಸನ್ಮಾನಿಸಿ ಅವರಿಂದ ಸಣ್ಣ ಸಣ್ಣ ವಿಡಿಯೋ ತುಣುಕು, ರೀಲ್ಸ್ ಸಿದ್ದಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದರೆ ಹೆಚ್ಚು ಜನರಿಗೆ ಈ ಬಗ್ಗೆ ತಿಳಿಯುತ್ತದೆ ಎಂದರು.
ಡಿಎಲ್‌ಓ ಡಾ.ಕಿರಣ್ ಮಾತನಾಡಿ, ಕುಷ್ಟರೋಗ ಇತರೆ ಖಾಯಿಲೆಗಳಂತೆ ಸಾಮಾನ್ಯ ಖಾಯಿಲೆಯಾಗಿದ್ದು ಬಹು ಔಷಧಿ ಚಿಕಿತ್ಸಾ ವಿಧಾನದ ಮೂಲಕ ಗುಣಪಡಿಸಬಹುದು. ಕುಷ್ಟರೋಗ ಮೈಕೋಬ್ಯಾಕ್ಟೀರಿಯಂ ಲೆಪ್ರ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು ಪಿ.ಬಿ ಕುಷ್ಟರೋಗ ಮತ್ತು ಎಂ.ಬಿ ಕುಷ್ಟ ರೋಗ ಎಂಬ ಎರಡು ಬಗೆಗಳಿವೆ. ನಿಗದಿತ ಚಿಕಿತ್ಸೆ ಮೂಲಕ ಇವುಗಳನ್ನು ಗುಣಪಡಿಸಬಹುದಾಗಿದೆ.
ಚರ್ಮದ ಬಣ್ಣ ಬದಲಾವಣೆ, ಚುಕ್ಕೆಗಳು, ಹೊಳೆಯುವ/ಎಣ್ಣೆ ಚರ್ಮ, ಕಣ್ಣು ಮುಚ್ಚಲು ಆಗದಿರುವುದು, ಹುಣ್ಣು, ಸ್ಪರ್ಶದ ನಷ್ಟ, ಬಿಸಿ ಅಥವಾ ತಂಪು ಅನುಭವ ಆಗದಿರುವುದು, ಕೈಗಳು/ಪಾದಗಳಲ್ಲಿ ಬಲಹೀನತೆ ಇತರೆಗಳು ಕುಷ್ಟರೋಗದ ಲಕ್ಷಣಗಳಾಗಿದ್ದು ತಕ್ಷಣ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಪಡೆಯಬೇಕು. ಚಿಕಿತ್ಸೆ ಪಡೆಯಲು ವಿಳಂಬ ಮಾಡಿದರೆ ಅಂಗವೈಕಲ್ಯತೆಗೆ ತುತ್ತಾಗುವ ಸಂಭವ ಹೆಚ್ಚಿರುವುದರಿಂದ ಶೀಘ್ರವಾಗಿ ಚಿಕಿತ್ಸೆ ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ ಡಿಸೆಂಬರ್ ಮಾಹೆವರೆಗೆ 41 ಕುಷ್ಟರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನಿಡಲಾಗುತ್ತಿದೆ. ಕಳೆದ 5 ವರ್ಷಗಳಲ್ಲಿ 251 ಕುಷ್ಟರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದ್ದು, ಗುಣಮುಖರಾಗಿದ್ದಾರೆ. ಕುಷ್ಟರೋಗದಿಂದ ಅಂಗವೈಕಲ್ಯತೆ ಹೊಂದಿದ 2 ರೋಗಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳಾದ ಡಾ.ನಾಗರಾಜ್ ನಾಯ್ಕ್, ಡಾ.ಗುಡುದಪ್ಪ ಕಸಬಿ, ಡಾ.ಹರ್ಷವರ್ಧನ್, ಡಾ.ನಾಗೇಶ್ , ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಕಾರಿಗಳು ಹಾಜರಿದ್ದರು.