ಮಂಜುನಾಥ್ ಶೆಟ್ಟಿ…

ಅರಿವು ಪಡೆದ ಮಕ್ಕಳು ಬಾಲ್ಯ ವಿವಾಹ, ಪೋಕ್ಸೋ ಅಪರಾಧ ಸೇರಿದಂತೆ ಹಲವಾರು ಅಪರಾಧಗಳನ್ನು ತಡೆಯಬಹುದು ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಅಭಯ ಧನಪಾಲ ಚೌಗಲಾ ಹೇಳಿದರು.


ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ,
ಜಿಲ್ಲಾ ಪಂಚಾಯತ್,ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಶಿವಮೊಗ್ಗ ಮಕ್ಕಳ ರಕ್ಷಣಾ ಘಟಕ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಿವಮೊಗ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜೆ.ಸಿ.ಐ. ಶಿವಮೊಗ್ಗ, ಶಕ್ತಿ ಜೂನಿಯರ್ ಛೇಂಬರ್ ಇಂಟರ್ ನ್ಯಾಷನಲ್, ಶಿವಮೊಗ್ಗ ರೋಟರಿ ಕ್ಲಬ್, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ಜಿಲ್ಲೆಯ ಆಯ್ದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ “ಬಾಲ್ಯ ವಿವಾಹ ಮುಕ್ತ ಭಾರತ” ಅಭಿಯಾನ ಹಾಗೂ “ರಸ್ತೆ ಸುರಕ್ಷಾ ಮಾಸಾಚರಣೆ” ಅಂಗವಾಗಿ ಗುರುವಾರ
ಡಾ।। ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ 1234 “ಕಾನೂನು ಸಾಕ್ಷರತಾ ಕ್ಲಬ್” ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರರು.


ನಮ್ಮದು ವೈವಿಧ್ಯಮಯ ದೇಶವಾಗಿದ್ದು ಗ್ರಾಮೀಣ ಭಾಗದಲ್ಲಿಯೇ ಹೆಚ್ಚಿನ ಜನಸಂಖ್ಯೆ ವಾಸಿಸುತ್ತಿರುವ ಕಾರಣ ಕಾನೂನುಗಳ ಅರಿವು ಕಡಿಮೆ ಇದೆ ಅನ್ನಬಹುದು.
ಆದರೆ ನೆಲದ ಕಾನೂನು ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ ಎಂದು ಭಾವಿಸಲಾಗುವುದು. ಕಾನೂನುಗಳ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ 1987 ರಲ್ಲಿ ಕಾನೂನು ಸೇವಾ ಅಧಿನಿಯಮವನ್ನು ಜಾರಿಗೆ ತರಲಾಯಿತು.ಇದರ ಮುಖ್ಯ ಉದ್ದೇಶ ಕಾನೂನಿನ‌ ಅರಿವು ಮೂಡಿಸುವುದು ಹಾಗೂ ಕಾನೂನು ನೆರವು ನೀಡುವುದಾಗಿದೆ.‌ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಕಟ್ಟಕಡೆಯ ವ್ಯಕ್ತಿಗೂ ಕಾನೂನು ಅರಿವು ಮೂಡಿಸುವ ಕಾರ್ಯವನ್ನು ಈ ಕಾಯ್ದೆಯಡಿ ಮಾಡುತ್ತಾ ಬರಲಾಗಿದೆ.


ದೇಶದ ಭವಿಷ್ಯವಾಗಿರುವ ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸಿದರೆ ಇವರು ತಮ್ಮ ಸುತ್ತಮುತ್ತ, ಇತರರಲ್ಲಿ ಅರಿವು ಮೂಡಿಸುತ್ತಾರೆ. ಹಾಗೂ ಅಪರಾಧಗಳನ್ನು ತಡೆಯುತ್ತಾರೆ. ಹೀಗೆ ಮಕ್ಕಳು ಅಪರಾಧಗಳನ್ನು ತಡೆದ ಹಲವು ನಿದರ್ಶನಗಳಿವೆ. ಆದ್ದರಿಂದ ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ.
ಈ ನಿಟ್ಟಿನಲ್ಲಿ ಮೊಟ್ಟ ಮೊದಲಿಗೆ ಚಂಡಿಗಡದಲ್ಲಿ
೨೦೧೦ ರಲ್ಲಿ‌ ಕಾನೂನು ಸಾಕ್ಷರತಾ ಕ್ಲಬ್ ನ್ನು ಆರಂಭಿಸಲಾಯಿತು. ಆನಂತರ ದೇಶಾದ್ಯಂತ ಆರಂಭಿಸಿ ಯಶಸ್ವಿಯಾಯಿತು. ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ೧೨೩೪ ಸಾಕ್ಷರತಾ ಕ್ಲಬ್ ಗಳನ್ನು ಉದ್ಘಾಟಿಸುತ್ತಿರುವುದು ತುಂಬಾ ಸಂತೋಷದ ವಿಷಯ. ಈ ಕ್ಲಬ್ ಗಳ ಮೂಲಕ ಮಕ್ಕಳು ಕಾನೂನುಗಳ ಅರಿವು ಪಡೆದು ಬಾಲ್ಯ ವಿವಾಹ, ಪೋಕ್ಸೋ, ರಸ್ತೆ ಅಪಘಾತಗಳು ಸೇರಿದಂತೆ ಹಲವಾರು ಅಪರಾಧಗಳನ್ನು ತಡೆಯಬಹುದು. ಹಾಗೂ ಸಮಾಜದಲ್ಲಿ ಅರಿವು‌ಮೂಡಿಸಬಹುದು. ಶಿಕ್ಷಕರು-ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಸಾಕ್ಷರತಾ ಕ್ಲಬ್ ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.


ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ,
ಕಾನೂನಿನ ಅರಿವು ನಮ್ಮಲ್ಲಿ ಬೌದ್ಧಿಕ ಸಿರಿತನವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಸೇರಿದಂತೆ ನಾವೆಲ್ಲರೂ ಸಂವಿಧಾನಾತ್ಮಕ ಮೌಲ್ಯಗಳನ್ನು ತಿಳಿದುಕೊಳ್ಳಬೇಕು. ಸಂವಿಧಾನ ಪೀಠಿಕೆಯನ್ನು ಸಂಪೂರ್ಣ ವಾಗಿ ಅರ್ಥ ಮಾಡಿಕೊಂಡರೆ ಗೊಂದಲಗಳು ಪರಿಹಾರವಾಗಿ ಸಾಮರಸ್ಯದಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.


ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ರಸ್ತೆ ಸುರಕ್ಷತೆ ಸೇರಿದಂತೆ ಬಾಲ್ಯ ವಿವಾಹ, ಪೋಕ್ಸೊ, ಇತರೆ
ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು.‌
ಕಳೆದ ವರ್ಷ ಜಿಲ್ಲೆಯಲ್ಲಿ ಪೋಕ್ಸೊ ಮತ್ತು ಬಾಲ್ಯವಿವಾಹ ಪ್ರಕರಣಗಳು ಹೆಚ್ಚು ವರದಿಯಾಗಿತ್ತು. ಅರಿವು ಹೆಚ್ಚಾಗಿರುವ ಕಾರಣಕ್ಕೂ ದೂರು ನೋಂದಣಿ ಹೆಚ್ಚಾಗಿತ್ತು ಅನ್ನಬಹುದು. ಇನ್ನೂ ಹೆಚ್ಚಿನ ಅರಿವು ಮೂಡಿಸಿ ಪ್ರಕರಣಗಳನ್ನು ತಗ್ಗಿಸುವಲ್ಲಿ ಎಲ್ಲರೂ ಕೈ ಜೋಡಸಬೇಕು. ಅಗತ್ಯ ಕಾನೂನುಗಳ ಅರಿವು ಪಡೆದು ಸಮಾಜವನ್ನು ರಚನಾತ್ಮಕವಾಗಿ ಕಟ್ಟಲು ಮುಂದೆ ಬರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಜಿ.ಪಂ. ಸಿಇಓ ಎನ್.ಹೇಮಂತ್ ಮಾತನಾಡಿ, ಕಳೆದ ವರ್ಷ ಜಿಲ್ಲೆಯಲ್ಲಿ‌ ಪೋಕ್ಸೊ ಪ್ರಕರಣಗಳು ಹೆಚ್ಚು ವರದಿಯಾಗಿದ್ದು, ಪರಿಣಾಮಕಾರಿಯಾಗಿ ಮಿಷನ್ ಸುರಕ್ಷಾ ಅಭಿಯಾನ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಬಾಲ್ಯ ವಿವಾಹ, ಪೋಕ್ಸೊ, ಇತರೆ ಅಪರಾಧಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಈ ವರ್ಷ ಶೇ.೫೦ ಬಾಲ್ಯ ವಿವಾಹ ತಡೆಯಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಕಾರ, ಕಲ್ಯಾಣ ಇಲಾಖೆಗಳು, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ಉತ್ತಮವಾಗಿದ್ದು ಅರಿವು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗುತ್ತಿದೆ.
ಹಾಗೂ ಕಳೆದ ೨ ವರ್ಷದಿಂದ ಎಲ್ಲ ಶಾಲೆಗಳಲಗಕಿ ಸಂವಿಧಾನದ ಪೀಠಿಕೆಯನ್ನು ಓದಿಸುತ್ತಿರುವರಿಂದ ಸಂವಿಧಾನದ ಅರಿವು ಹೆಚ್ಚಾಗಿದೆ. ಶಿವಮೊಗ್ಗದಲ್ಲಿ ಮಕ್ಕಳು ಸಹಾಯವಾಣಿ ೧೦೯೮ ನ್ನು ಬಳಕೆ ಮಾಡಿ ಬಾಲ್ಯ ವಿವಾಹ ತಡೆಗಟ್ಟಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.


ಗ್ರಾಮ ಪಂಚಾಯತಿ ಮಟ್ಟದ ಗ್ರಂಥಪಾಲಕರಿಗೆ ಕಾನೂನು ಅರಿವು ಕಾರ್ಯಕ್ರಮ ಮಾಡಿದಲ್ಲಿ ಅವರು ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಕಾನೂನು ಅರಿವು‌ ಮೂಡಿಸಲು ಸಹಕರಿಸುತ್ತಾರೆ ಎಂದರು.


ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್. ರಾಘವೇಂದ್ರ ಸ್ವಾಮಿ ಮಾತನಾಡಿ, ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಿದಲ್ಲಿ ಅವರು ಭವಿಷ್ಯದ ಉತ್ತಮ ನಾಗರೀಕರಾಗಿ ಹೊರ ಹೊಮ್ಮುವರು. ಬಾಲ್ಯವಿವಾಹ, ಪೋಕ್ಸೊ ಸೇರಿದಂತೆ ದಿನನಿತ್ಯದ ಕಾನೂನುಗಳು, ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದ್ದು, ಕಾನೂನು ಸೇವೆಗಳ ಪ್ರಾಧಿಕಾರ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಈ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಎಲ್ಲರೂ ಇದರ ಸದುಪಯೋಗ ಪಡೆಯಬೇಕೆಂದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಸಮಿತಿಗಳು ಕಾನೂನು ಅರಿವು, ನೆರವು ಮತ್ತು ಲೋಕ ಅದಾಲತ್ ಈ ಮೂರು ಮುಖ್ಯ ಕಾರ್ಯಕ್ರಮಗಳನ್ನು ಮಾಡುತ್ತಿವೆ. ಮಕ್ಕಳಿಗೆ ಸಂಬಂಧಿಸಿದ ಕಾನೂನಾತ್ಮಕ ಸಮಸ್ಯೆಗಳಾದ ಪೋಕ್ಸೊ, ಬಾಲ್ಯವಿವಾಹಗಳನ್ನು ತಡೆಯಲು ಅರಿವು ಕಾರ್ಯಕ್ರಮಗಳು,
ಮಿಷನ್ ಸುರಕ್ಷಾ ಅಭಿಯಾನವನ್ನು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಜನನ ಪ್ರಮಾಣ ಪತ್ರ ಇಲ್ಲದೇ ಶಾಲೆಗೆ ದಾಖಲಾಗದಿರುವ 5 ಸಾವಿರ ಮಕ್ಕಳನ್ನು ಗುರುತಿಸಿದ್ದು ಈ ಪೈಕಿ‌ 500 ಮಕ್ಕಳಿಗೆ ಜಿ.ಪಂ, ಶಿಕ್ಷಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಮತ್ತು ಇತರೆ ಇಲಾಖೆಗಳ ಸಹಯೋಗದಲ್ಲಿ ಜನನ ಪ್ರಮಾಣ ಪತ್ರ ಒದಗಿಸಲಾಗಿದೆ.


ಶಿಕ್ಷಕರು ಸಮಾಜಮುಖಿಯಾದರೆ ಶಾಲೆಗಳ, ವಿದ್ಯಾರ್ಥಿಗಳ ಉತ್ತಮ ಬೆಳವಣಿಗೆ ಸಾಧ್ಯ. ಬಾಲ್ಯ ವಿವಾಹ, ವರದಕ್ಷಿಣೆ ಕಾಯ್ದೆ, ಪೊಕ್ಸೊ ಕಾಯ್ದೆ, ಸಂವಿಧಾನ,
ಮೂಲಭೂತ ಕರ್ತವ್ಯಗಳು ಸೇರಿದಂತೆ ಅಗತ್ಯ ಕಾನೂನು ತಿಳಿಸುವ ಉದ್ದೇಶದಿಂದ ಶಾಲೆಗಳಲ್ಲಿ ಸಾಕ್ಷರತಾ ಕ್ಲಬ್ ಗಳನ್ನು ಸ್ಥಾಪಿಸಲಾಗಿದ್ದು, ಮಕ್ಕಳಿಗೆ ವಿವಿಧ ಇಲಾಖೆಗಳ ಮಾಹಿತಿ ಸಿಗುತ್ತದೆ. ಹಾಗೂ ಅವರ ಜ್ಞಾನ ವಿಸ್ತಾರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ, ಅನುದಾನಿತ ಪ್ರೌಢಶಾ ಶಾಲೆಗಳಲ್ಲಿ ಆಯೋಜಿಸಲಾಗಿದ್ದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ರಸ್ತೆ ಸುರಕ್ಷತೆ ಕುರಿತು ಅರಿವು‌ ಮೂಡಿಸುವ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಎಸ್.ಆರ್. ಸ್ವಾಗತಿಸಿದರು.
ಪದವಿ ಪೂರ್ವ ಶಿಕ್ಷಣ, ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಎಸ್. ಗುಂಡಪಲ್ಲಿ ವಂದಿಸಿದರು.
ಸಮಾಜ ಕಲ್ಯಾಣ ಇಲಾಖೆ,ಉಪನಿರ್ದೇಶಕರು
ಶ್ರೀ ಮಲ್ಲೇಶಪ್ಪ ಡಿ, ಡಿಸಿಪಿಒ‌ ಮಂಜುನಾಥ್ ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿ ಶಶಿರೇಖಾ, ಬಿಇಓ ರಮೇಶ್, ಜೆಸಿಐ ನ ಸ್ವಾತಿ, ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *