ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಅವಿನಹಳ್ಳಿ ಹೋಬಳಿ ಕೋಳೂರು ಗ್ರಾಮನ ಪಂಚಾಯಿತಿ ಬೇಸೂರು ಗ್ರಾಮದಲ್ಲಿ ಅಣುಸ್ಥಾವರ ಘಟಕ ಸ್ಥಾಪಿಸುವ ಯೋಚನೆ ಕೈಬಿಡಬೇಕೆಂದು ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ವೇದಿಕೆಯ ಹೋರಾಟಕ್ಕೆ ಶಿವಮೊಗ್ಗ ನಗರ ಪರ್ಯಾವರಣ ಟ್ರಸ್ಟ್ ಬೆಂಬಲ ಸೂಚಿಸಿದೆ.

ಪರ್ಯಾವರಣ ಟ್ರಸ್ಟ್ ಸದಸ್ಯರು ಮತ್ತು ಮಲೆನಾಡು ಅಣು ಸ್ಥಾವರ ವಿರೋಧಿ ಹೋರಾಟ ಸಮಿತಿ ಸಭೆ ನಡೆಸಿ ಬೇಸೂರಿನಲ್ಲಿ ಸ್ಥಾಪಿಸಲುದ್ದೇಶಿಸಿರುವ ಈ ಯೋಜನೆಯಿಂದ ಪರಿಸರ ಹಾಗೂ ಜನರ ಮೇಲೆ ಆಗು ದುಷ್ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿತು.

ಟ್ರಸ್ಟ್ ನ ಗೌರವಾಧ್ಯಕ್ಷ ಪ್ರೊ. ಬಿ. ಎಂ. ಕುಮಾರಸ್ವಾಮಿ ಮಾತನಾಡಿ ಬೇಲೂರಿನಲ್ಲಿ ಸ್ಥಾಪಿಸಲುದ್ದೇಶಿಸಿರುವ ಅಣುವಿದ್ಯುತ್ ಉತ್ಪಾದನೆ ಯಾವ ರೀತಿಯಲ್ಲೂ ಸಮರ್ಥನೆ ಮಾಡುವಂತೆ ಇಲ್ಲ. ಮಲೆನಾಡಿನ ಪರಿಸರ ಮತ್ತು ಜೀವಿಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಬಹುದಾದ ಈ ಯೋಜನೆ, ಆರ್ಥಿಕವಾಗಿಯೂ ದುಬಾರಿ ವೆಚ್ಚದ ಯೋಜನೆ ಯಾಗಿದೆ. ಇಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಅದರ ಪರಿಣಾಮ ಸುತ್ತಮುತ್ತಲಿನ ಕನಿಷ್ಠ ಎರಡು ಮೂರು ಜಿಲ್ಲೆಗಳ ಮೇಲೆ ಆಗುತ್ತದೆ. ಶಿವಮೊಗ್ಗ ಸೇರಿದಂತೆ ಮಲೆನಾಡಿನ ರಕ್ಷಣೆಗಾಗಿ ಈ ಯೋಜನೆ ವಿರುದ್ಧ ನಾವು ಹೋರಾಡಬೇಕಾಗಿದೆ ಎಂದರು.

ಪರಿಸರ ತಜ್ಞ ಡಾ. ಶ್ರೀಪತಿ ಎಲ್.ಕೆ . ಮಾತನಾಡಿ ಅಣು ವಿದ್ಯುತ್ ಸ್ಥಾವರದಲ್ಲಿ ಉತ್ಪತ್ತಿಯಾಗುವ ವಿಕಿರಣ ತ್ಯಾಜ್ಯವನ್ನು ಘಟಕ ಆವರಣಗಳಲ್ಲೇ ಸಂಗ್ರಹ ಮಾಡಬೇಕಾಗಿದ್ದು ಇದು ಕನಿಷ್ಠ ಸಾವಿರ ವರ್ಷಗಳ ತನಕ ರಕ್ಷಣೆ ಮಾಡಿಕೊಳ್ಳಬೇಕು. ಸ್ಥಾವರಗಳನ್ನು ಸಹ ಕೆಲವು ವರ್ಷಗಳ ನಂತರ ನಿಷ್ಕ್ರಿಯ ಗೊಳಿಸಬೇಕಾಗುತ್ತದೆ. ಒಟ್ಟಾರೆ ಮುಂದೆ ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣವಾಗುವ ಈ ಯೋಜನೆ ಪಶ್ಚಿಮ ಘಟ್ಟದ ಪ್ರದೇಶಕ್ಕಂತೂ ಸೂಕ್ತವೇ ಅಲ್ಲ ಎಂದು ನುಡಿದರು.

ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಎಂ. ಶಂಕರ್ ಮಾತನಾಡಿ ಮೇ 27 ರಂದು ಮಲೆನಾಡು ಅಣು ಸ್ಥಾವರ ವಿರೋಧಿ ಹೋರಾಟ ವೇದಿಕೆಯು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಜನಾಂದೋಲನ ಸಭೆಯಲ್ಲಿ ಪರ್ಯಾವರಣ ಟ್ರಸ್ಟ್ ಪಾಲ್ಗೊಳ್ಳಲಿದ್ದು ಈ ಹೋರಾಟಕ್ಕೆ ನಗರದ ವಿವಿಧ ಸಂಘ ಸಂಸ್ಥೆಗಳೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪ್ರಮುಖರಾದ ಗಿರೀಶ್ ಪಟೇಲ್,ಪ್ರೊ. ಎ.ಎಸ್.ಚಂದ್ರಶೇಖರ್, ರಮೇಶ್ ಹೆಗ್ಡೆ, ಅರವಿಂದ ಪಾಟೀಲ್, ಪ್ರದೀಪ್ ಮಠದ್, ಬಾಲಕೃಷ್ಣ ನಾಯ್ಡು, ದಿನೇಶ್ ಶೇಟ್, ತ್ಯಾಗರಾಜ ಮಿತ್ಯಾಂತ, ಲೋಕೇಶಪ್ಪ, ಜಗದೀಶ್ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *