ಮಂಜುನಾಥ್ ಶೆಟ್ಟಿ…

ಮಾದಕ ದ್ರವ್ಯಗಳ ದುರುಪಯೋಗವು ವ್ಯಕ್ತಿಯ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಯುವಜನತೆ ದೃಢ ಸಂಕಲ್ಪದೊಂದಿಗೆ ಪ್ರತಿಜ್ಞೆ ಮಾಡಿ, ಇದನ್ನು ತಡೆಯಲು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಯುವಜನತೆಗೆ ಕರೆ ನೀಡಿದರು.

ರಾಷ್ಟ್ರೀಯ ಏಕತಾ ದಿನಾಚರಣೆ ಹಾಗೂ ಮಾದಕ ದ್ರವ್ಯ ದುರುಪಯೋಗದ ವಿರುದ್ಧದ ಜಾಗೃತಿ ಸಂದೇಶದೊಂದಿಗೆ
ಚಿತ್ರದುರ್ಗದಿಂದ ಹಂಚಿನ ಸಿದ್ದಾಪುರ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸಿದ ಮೋಟಾರ್ ಸೈಕಲ್ ರ್ಯಾಲಿ ತಂಡವನ್ನು ನಗರದ ಗೋಪಿ ಸರ್ಕಲ್‌ನಲ್ಲಿ ಸಾರ್ವಜನಿಕರು ಮತ್ತು ಸಂಘಟಕರೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿ, ಅವರು ಮಾತನಾಡಿದರು.
ಈ ಅಭಿಯಾನದಡಿ ಜಿಲ್ಲೆಯಲ್ಲಿ‌ ಡ್ರಗ್ಸ್ ಸೇವಿಸುವ ಮತ್ತು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಶಿವಮೊಗ್ಗದಲ್ಲೇ ಈ ವರ್ಷ ಸುಮಾರು 550 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ, ಸುಮಾರು 40 ಕೆ.ಜಿ ಗಾಂಜಾ ಮತ್ತು ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಮಾರಾಟದಲ್ಲಿ ತೊಡಗಿರುವವರನ್ನು ಜೈಲಿಗೆ ಕಳುಹಿಸಲಾಗಿದ್ದು, ಎನ್ ಡಿ ಪಿ ಎಸ್ ಕಾಯ್ದೆಯಡಿ ಅಪರಾಧಿಗಳಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಹೀಗೆ ಮಾದಕ ದ್ರವ್ಯ ಬಳಕೆ ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಕರ್ನಾಟಕವನ್ನು ಸಂಪೂರ್ಣವಾಗಿ ನಶಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ವತಿಯಿಂದ ‘ ಬೇಡ ಬ್ರೋ’ ‘ನಶಾ ಮುಕ್ತ ಕರ್ನಾಟಕ’ ಮತ್ತು ‘ಆಪರೇಷನ್ ರೈಸ್’ ಎಂಬ ವಿಶೇಷ ಆ್ಯಂಟಿ ಡ್ರಗ್ ಪ್ರೋಗ್ರಾಂ ಅನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೆಎಸ್ಆರ್ಪಿ ತಂಡವು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಬೆಂಗಳೂರಿನಿಂದ ಗುಜರಾತ್ ವರೆಗೆ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *