ಮಂಜುನಾಥ್ ಶೆಟ್ಟಿ…

ಐದು ವರ್ಷ ಏಳು ತಿಂಗಳ ವಯಸ್ಸಿನಲ್ಲೇ 200 ದೇಶಗಳ ಧ್ವಜಗಳನ್ನು ಗುರುತಿಸಿ ಹೆಸರುಗಳನ್ನು ಹೇಳಿದ ಶಿವಮೊಗ್ಗದ ಪೇಸ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಬಿ. ಕೆ. ಶ್ರೀನಿಕಾ ಅಂತರರಾಷ್ಟ್ರೀಯ ದಾಖಲೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿವಮೊಗ್ಗದ ಪೇಸ್ ಇಂಟರ್‌ನ್ಯಾಷನಲ್ ಶಾಲೆಯ (PACE International School) ವಿದ್ಯಾರ್ಥಿನಿ ಬಿ. ಕೆ. ಶ್ರೀನಿಕಾ ಅವರು ಅತಿ ಕಿರಿಯ ವಯಸ್ಸಿನಲ್ಲೇ 200 ದೇಶಗಳ ಧ್ವಜಗಳನ್ನು ಗುರುತಿಸಿ, ಅವುಗಳ ಹೆಸರುಗಳನ್ನು ಹೇಳುವ ಮೂಲಕ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಪ್ರಜ್ಞಾ ಎಜುಕೇಶನ್ ಟ್ರಸ್ಟ್ (ರಿ.) ವತಿಯಿಂದ ನಡೆಸಲ್ಪಡುವ ಪೇಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀನಿಕಾ ಅವರು, ಕೇವಲ 5 ವರ್ಷ, 7 ತಿಂಗಳು ಹಾಗೂ 2 ದಿನಗಳ ವಯಸ್ಸಿನಲ್ಲಿ ಈ ಗಮನಾರ್ಹ ಸಾಧನೆ ಮಾಡಿದ್ದಾರೆ. 2026ರ ಆಗಸ್ಟ್ 20ರಂದು ಕರ್ನಾಟಕದ ಶಿವಮೊಗ್ಗದಲ್ಲಿ ದಾಖಲಾದ ಈ ಸಾಧನೆಯು ಅವರ ಅಪಾರ ನೆನಪಿನ ಶಕ್ತಿ, ಕಲಿಕೆಯ ಆಸಕ್ತಿ, ಕುತೂಹಲ ಹಾಗೂ ಏಕಾಗ್ರತೆಗೆ ಸಾಕ್ಷಿಯಾಗಿದೆ.


ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಪ್ರಕಟಿಸಲಾದ ದಾಖಲೆಯ ಪ್ರಕಾರ, ಚಾರ್ಟ್‌ನಲ್ಲಿರುವ 200 ದೇಶಗಳ ಧ್ವಜಗಳನ್ನು ಗುರುತಿಸಿ ಅವುಗಳ ಹೆಸರುಗಳನ್ನು ಹೇಳಿದ ಅತ್ಯಂತ ಕಿರಿಯ ವಯಸ್ಸಿನ ಸಾಧಕಿಯಾಗಿ ಶ್ರೀನಿಕಾ ಗುರುತಿಸಿಕೊಂಡಿದ್ದಾರೆ. ಬಾಲ್ಯದಲ್ಲಿಯೇ ಜಗತ್ತಿನ ವಿವಿಧ ದೇಶಗಳು, ಅವುಗಳ ಧ್ವಜಗಳು, ಜನರು ಹಾಗೂ ಸಂಸ್ಕೃತಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವುದು ಅವರ ಈ ಸಾಧನೆಗೆ ಪ್ರೇರಣೆಯಾಗಿದೆ.


ಶ್ರೀನಿಕಾ ಅವರ ಈ ಸಾಧನೆಯು ಇತರ ಮಕ್ಕಳಿಗೂ ಹೊಸ ವಿಷಯಗಳನ್ನು ಕಲಿಯಲು, ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಹಾಗೂ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಿಕೊಳ್ಳಲು ಸ್ಫೂರ್ತಿಯಾಗಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ಕುತೂಹಲ, ಜ್ಞಾನಾರ್ಜನೆಯ ಆಸಕ್ತಿ ಮತ್ತು ಜಾಗತಿಕ ದೃಷ್ಟಿಕೋನವನ್ನು ಬೆಳೆಸುವಲ್ಲಿ ಇಂತಹ ಸಾಧನೆಗಳು ಮಹತ್ವದ ಪಾತ್ರ ವಹಿಸುತ್ತವೆ.

ಈ ಸಾಧನೆಗೆ ಪ್ರಜ್ಞಾ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಕೆ. ಎಸ್. ಈಶ್ವರಪ್ಪ, ಟ್ರಸ್ಟ್‌ನ ಖಜಾಂಚಿಗಳಾದ ಸನ್ಮಾನ್ಯ ಶ್ರೀ ಕೆ. ಈ. ಕಾಂತೇಶ್, ಟ್ರಸ್ಟ್‌ನ ಕಾರ್ಯದರ್ಶಿಗಳಾದ ಶ್ರೀ ಬಿ. ಎನ್. ವಿಶ್ವನಾಥಯ್ಯ, ಉಪಾಧ್ಯಕ್ಷರಾದ ಶ್ರೀ ಆನಂದ್, ಪೇಸ್ ಇಂಟರ್‌ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಶ್ರೀ ಪವನ್ ಕುಮಾರ್ ಹಾಗೂ ಶಾಲೆಯ ಕೋ ಆರ್ಡಿನೇಟರ್ ಶ್ರೀಮತಿ ಶುಭ ಅವರು ವಿದ್ಯಾರ್ಥಿನಿಯ ಸಾಧನೆಯನ್ನು ಅಭಿನಂದಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಶ್ರೀನಿಕಾ ಅವರು ಇನ್ನಷ್ಟು ಸಾಧನೆಗಳನ್ನು ಮಾಡಿ ಶಾಲೆಗೆ, ಕುಟುಂಬಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.

ಶ್ರೀನಿಕಾ ಅವರು ಶಿವಮೊಗ್ಗದ ಓ.ಟಿ. ರಸ್ತೆಯ ನಿವಾಸಿಗಳಾದ ಶ್ರೀ ಭಾಸ್ಕರ್ ಕೆ. ಮತ್ತು ಶ್ರೀಮತಿ ಗಾಯತ್ರಿ ದಂಪತಿಯ ಪುತ್ರಿ. ತಮ್ಮ ಮಗಳ ಈ ಅಪ್ರತಿಮ ಸಾಧನೆಯಿಂದ ಪೋಷಕರು ಹಾಗೂ ಕುಟುಂಬದ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ಬಾಲ್ಯದಲ್ಲಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶ್ರೀನಿಕಾ ಅವರ ಸಾಧನೆಯು ಶಿವಮೊಗ್ಗ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು, ಅವರ ಉಜ್ವಲ ಭವಿಷ್ಯಕ್ಕೆ ಎಲ್ಲೆಡೆಯಿಂದ ಶುಭಾಶಯಗಳು ಹರಿದುಬರುತ್ತಿವೆ.

Leave a Reply

Your email address will not be published. Required fields are marked *