ಮಂಜುನಾಥ್ ಶೆಟ್ಟಿ…
ತೀರ್ಥಹಳ್ಳಿ: ಸಮಾಜಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಮತ್ತು ಸಾಧನೆಯನ್ನು ಗುರುತಿಸಿ, ಕರ್ನಾಟಕ ಸಂಘ ಶಾರ್ಜಾ ವತಿಯಿಂದ ನೀಡಲಾಗುವ 2026ನೇ ಸಾಲಿನ ಪ್ರತಿಷ್ಠಿತ ‘ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ’ಗೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಗ್ರಾಮದ ಸಮಾಜಸೇವಕ ಹಾಗೂ ಉದ್ಯಮಿ ಶ್ರೀಯುತ ಸುಂದರ್ ಶೆಟ್ಟಿ ಅವರು ಆಯ್ಕೆಯಾಗಿರುವುದು ತೀರ್ಥಹಳ್ಳಿ ತಾಲೂಕಿಗೆ ಹಾಗೂ ಬಂಟರ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಕರ್ನಾಟಕ ಸಂಘ ಶಾರ್ಜಾದ 24ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 15ರಂದು ಅಜ್ಮಾನ್ನ ನಾರ್ತ್ ಗೇಟ್ ಬ್ರಿಟಿಷ್ ಸ್ಕೂಲ್ನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಸುಂದರ್ ಶೆಟ್ಟಿ ಅವರಿಗೆ ಈ ಗೌರವವನ್ನು ಪ್ರದಾನ ಮಾಡಲಾಯಿತು.
ಸಮಾಜಸೇವೆ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸುಂದರ್ ಶೆಟ್ಟಿ ಅವರ ನಿರಂತರ ಸೇವೆ, ಸಾಧನೆ ಮತ್ತು ಕನ್ನಡ ನಾಡಿನ ಗೌರವವನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದಿರುವ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ಯುಎಇಯ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ ಹಾಗೂ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ನಮ್ಮ ತೀರ್ಥಹಳ್ಳಿ ತಾಲೂಕಿನ ತೂದುರು ಗ್ರಾಮದ ಜಾವಳ್ಳಿ ಸುಂದರ್ ಶೆಟ್ಟಿ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ಪ್ರತಿಷ್ಠಿತ ಗೌರವ ಲಭಿಸಿರುವುದು ಇಡೀ ತೀರ್ಥಹಳ್ಳಿ ಬಂಟರ ಸಮಾಜಕ್ಕೆ ಅಪಾರ ಸಂತಸ ಹಾಗೂ ಹೆಮ್ಮೆಯನ್ನು ತಂದಿದೆ.
ಶ್ರೀಯುತ ಸುಂದರ್ ಶೆಟ್ಟಿ ಅವರು ಮುಂದಿನ ದಿನಗಳಲ್ಲಿಯೂ ಸಮಾಜಸೇವೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಲಿ, ಅವರಿಗೆ ಉತ್ತಮ ಆರೋಗ್ಯ, ಹಾಗೂ ಯಶಸ್ಸು ದೊರೆಯಲಿ ಎಂದು ಹಾರೈಸುತ್ತಾ, ತೀರ್ಥಹಳ್ಳಿ ಬಂಟರ ಸಂಘದ ಪರವಾಗಿ ಮತ್ತೊಮ್ಮೆ ಅಭಿನಂದನೆಗಳು.
ಬಂಟರ ಸಂಘದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ…