ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ ಪಾರ್ಕ್ ಬಡಾವಣೆಯಲ್ಲಿರುವ ಮಾತೃವಾತ್ಸಲ್ಯ ಆಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ನವೀಕರಿಸಲಾಗಿದ್ದು ನವೆಂಬರ್ 29ರ ಭಾನುವಾರ ಹಿರಿಯ ವೈದ್ಯರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಪೃಥ್ವಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ವೈದ್ಯರಾದ ಡಾ. ಟಿ. ನಾರಾಯಣ್, ಡಾ. ಎಸ್.ಐ. ಬಿರಾದರ್, ಡಾ. ನಿರ್ಮಲ, ಡಾ. ರಜನಿ ಬಾಯಿ, ಡಾ. ಶಿವರಾಮ ಕೃಷ್ಣ, ಡಾ. ಬಿ. ಲಕ್ಷ್ಮೀನಾರಾಯಣಾಚಾರ್ ಹಾಗೂ ಡಾ. ಧನಂಜಯ ಸರ್ಜಿ ಅವರು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಹಿರಿಯ ವೈದ್ಯರು ಆಶೀರ್ವದಿಸಿ ಉದ್ಘಾಟನೆ ನೆರವೇರಿಸಲಿದ್ದು, ಸರಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ…

ಮಾತೃವಾತ್ಸಲ್ಯ ಹೆಲ್ತ್ ಕೇರ್‌ನಲ್ಲಿ ಒಟ್ಟು 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. 30ಕ್ಕೂ ಹೆಚ್ಚು ಸುಸಜ್ಜಿತ ಐಸಿಯು ಹಾಸಿಗೆಗಳು, ಆಧುನಿಕ ಕ್ಯಾತ್ ಲ್ಯಾಬ್ ಹಾಗೂ ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳನ್ನು ಹೊಂದಿದೆ.

ಕ್ಯಾತ್ ಲ್ಯಾಬ್‌ನಲ್ಲಿ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ, ಪೇಸ್‌ಮೇಕರ್ ಅಳವಡಿಕೆ ಸೇರಿದಂತೆ ಹೃದಯ ಸಂಬಂಧಿತ ಚಿಕಿತ್ಸೆಗಳನ್ನು ನೀಡಲು ಸೌಲಭ್ಯ ಕಲ್ಪಿಸಲಾಗಿದೆ. ರಕ್ತನಾಳಗಳ ಒಳಭಾಗವನ್ನು ಪರಿಶೀಲಿಸಿ ಚಿಕಿತ್ಸೆ ನೀಡಲು ಸಹಾಯಕವಾಗುವ ಐವಸನ್ (IVUS) ಎಂಬ ಆಧುನಿಕ ಸಾಧನವನ್ನೂ ಅಳವಡಿಸಲಾಗಿದೆ ಎಂದು ತಿಳಿಸಿದರು.

ಮಾಡ್ಯುಲರ್ ಆಪರೇಷನ್ ಥಿಯೇಟರ್‌ನಲ್ಲಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅಗತ್ಯವಾದ ಆಧುನಿಕ ಸೌಲಭ್ಯಗಳಿವೆ. ಯಾವುದೇ ಗಂಭೀರ ಪ್ರಕರಣಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ತಜ್ಞ ವೈದ್ಯರ ತಂಡ ಆಸ್ಪತ್ರೆಯಲ್ಲಿದೆ ಎಂದು ಹೇಳಿದರು.

ಹಲವು ವಿಭಾಗಗಳು ಒಂದೇ ಸೂರಿನಡಿ…

ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್, ಎಮರ್ಜೆನ್ಸಿ ಮೆಡಿಸಿನ್, ಕಾರ್ಡಿಯಾಲಜಿ, ಜನರಲ್ ಸರ್ಜರಿ, ಲ್ಯಾಪರೋಸ್ಕೋಪಿ, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ ವಿಭಾಗ, ಮೂಳೆ ರೋಗ, ಮೂತ್ರ ರೋಗ, ಚರ್ಮ ರೋಗ, ನರರೋಗ ಹಾಗೂ ಮೆದುಳು ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ವಿಭಾಗಗಳನ್ನು ಆರಂಭಿಸಲಾಗಿದೆ.

ರೋಗಿಗಳಿಗೆ ಒಂದೇ ಸೂರಿನಡಿ ವಿವಿಧ ವೈದ್ಯಕೀಯ ಸೇವೆಗಳು ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. 24 ಗಂಟೆಗಳ ಸಿಟಿ ಸ್ಕ್ಯಾನ್, ಎಕ್ಸ್‌ರೇ, ಅಲ್ಟ್ರಾಸೌಂಡ್, ಎಕೋ ಸ್ಕ್ಯಾನ್, ರೇಡಿಯಾಲಜಿ, ಔಷಧಾಲಯ ಹಾಗೂ ಪ್ರಯೋಗಾಲಯ ಮತ್ತು ಡಯಾಗ್ನೋಸ್ಟಿಕ್ ಸೇವೆಗಳು ಲಭ್ಯವಿರಲಿವೆ ಎಂದರು.

ಅನುಭವಿ ವೈದ್ಯರ ತಂಡ…

ಆಸ್ಪತ್ರೆಯಲ್ಲಿ ಹೃದಯರೋಗ ತಜ್ಞರಾದ ಡಾ. ಮಹೇಶ್ ಮೂರ್ತಿ ಮತ್ತು ಡಾ. ಮಿಥುನ್, ಸ್ತ್ರೀರೋಗ ತಜ್ಞರಾದ ಡಾ. ಗೀತಾರಾಣಿ ಮತ್ತು ಡಾ. ನಾಗಮಣಿ, ಮಕ್ಕಳ ತಜ್ಞೆ ಡಾ. ವಿದ್ಯಾ, ಲ್ಯಾಪರೋಸ್ಕೋಪಿಕ್ ಸರ್ಜನ್ ಡಾ. ಸಂತೋಷ್ ಭೂಪಾಲ್, ರೇಡಿಯಾಲಜಿಸ್ಟ್ ಡಾ. ಸಿಂಧೂ, ವೈದ್ಯರಾದ ಡಾ. ಸಚಿನ್ ಹಾಗೂ ತುರ್ತು ಚಿಕಿತ್ಸಾ ತಜ್ಞ ಡಾ. ಭರತ್ ಸೇರಿದಂತೆ ಹಲವು ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.

ಕೈಗೆಟುಕುವ ದರದಲ್ಲಿ ಚಿಕಿತ್ಸೆ…

ಆಸ್ಪತ್ರೆಯಲ್ಲಿ ಖಾಸಗಿ ವಿಮಾ ಕಂಪನಿಗಳ ಕ್ಯಾಶ್‌ಲೆಸ್ ಚಿಕಿತ್ಸೆ ಸೌಲಭ್ಯ ಲಭ್ಯವಿದೆ. ಆಯುಷ್ಮಾನ್ ಭಾರತ್ ಸೇರಿದಂತೆ ಸರ್ಕಾರಿ ಆರೋಗ್ಯ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ಡಾ. ಪೃಥ್ವಿ ತಿಳಿಸಿದರು.

Leave a Reply

Your email address will not be published. Required fields are marked *