ಶಿವಮೊಗ್ಗ: ಶಿಕ್ಷಕರು ಆರ್ಥಿಕ ಸಂಕಷ್ಟಕ್ಕೆ ಒಳಗಾದಾಗ ನೆರವು ನೀಡುವವರು ಕಡಿಮೆ. ಶಿಕ್ಷಕರಿಂದ ಸಾಲ ತೀರಿಸಲು ಸಾಧ್ಯವಿಲ್ಲ ಎಂಬ ಮನೋಭವವೇ ಇದಕ್ಕೆ ಕಾರಣ. ಆದರೆ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ನಿಯಮಿತವು ತನ್ನ ಸದಸ್ಯರಿಗೆ ಸಂಕಷ್ಟದ ಸಮಯದಲ್ಲಿ ಸಕಾಲಕ್ಕೆ ಸರಿಯಾಗಿ ಸಾಲ ಸೌಲಭ್ಯ ನೀಡಲು ಕಟಿಬದ್ಧವಾಗಿದೆ ಎಂದು ನಿಯಮಿತದ ಅಧ್ಯಕ್ಷ ಮಹಾಬಲೇಶ್ವರ ಹೆಗೆಡೆ ಹೇಳಿದರು.

ರಟ್ಟಿಹಳ್ಳಿಯ ತಾವರಗಿ ರಸ್ತೆಯ ಭಗತ್‌ಸಿಂಗ್ ಸರ್ಕಲ್‌ನ ಸಿ.ಟಿ.ಪಾಟೀಲ್ ಕಾಂಪ್ಲೆಕ್ಸ್‌ನಲ್ಲಿ ದಿನಾಂಕ ೧೧-೦೪-೨೦೨೨ರ ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ನಿಯಮಿತದ ೭ನೇ ಶಾಖೆಯ ಉದ್ಘಾಟನೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ತೀರ್ಥಹಳ್ಳಿ ತಾಲೂಕಿನಲ್ಲಿ ೨೦೦೮ರಲ್ಲಿ ೫.೪೦ ಲಕ್ಷ ರೂ.ಗಳಲ್ಲಿ ಪ್ರಾರಂಭಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘವು ೨೦೧೩ರವರೆಗೆ ತೀರ್ಥಹಳ್ಳಿ ತಾಲೂಕಿನಲ್ಲಿ ಮಾತ್ರ ಕಾರ್ಯನಿರ್ವಹಿಸಿ ೨೦೧೫ರಲ್ಲಿ ಶಿಕ್ಷಕರ ಸೌಹಾರ್ದ ಸಹಕಾರಿಯಾಗಿ ೫ ಜಿಲ್ಲೆಗಳಿಗೆ ವಿಸ್ತಾರಗೊಂಡಿತು. ತೀರ್ಥಹಳ್ಳಿ, ಶಿವಮೊಗ್ಗ, ಹೊನ್ನಾಳಿ, ಸಾಗರ, ಸಿದ್ದಾಪುರ, ಶಿರಸಿಯಲ್ಲಿ ಶಾಖೆ ಹೊಂದಿರುವ ನಿಯಮಿತವು ಏಪ್ರಿಲ್ ೧೧ರ ಇಂದು ರಟ್ಟೇಹಳ್ಳಿಯಲ್ಲಿ ೭ನೇ ಶಾಖೆ ಪ್ರಾರಂಭಿಸಿದೆ ಎಂದರು.
ಕಳೆದೆರೆಡು ವರ್ಷಗಳ ಕೋವಿಡ್-೧೯ರ ಸಂಕಷ್ಟ ಕಾಲದಲ್ಲಿಯೂ ಸಹ ಲಾಭಗಳಿಸಿ, ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು ೩೨೩ ಕೋಟಿ ವಾರ್ಷಿಕ ವಹಿವಾಟನ್ನು ಹೊಂದಿ, ಸಹಕಾರಿಯು ೫೪,೫೮,೯೩೬ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.

ಶಾಖೆ ಉದ್ಘಾಟಿಸಿ ಮಾತನಾಡಿದ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ ಬಣಕಾರ್ ಶಿಕ್ಷಕರಿಂದ ವಿದ್ಯೆ ಕಲಿತ ಅನೇಕ ವಿದ್ಯಾರ್ಥಿಗಳು ಒಳ್ಳೆಯ ಉದ್ಯೋಗ ಪಡೆದು ಕೈತುಂಬಾ ಸಂಬಳ, ಮನೆ, ಆಸ್ತಿ-ಪಾಸ್ತಿ, ಸಂಪತ್ತನ್ನು ಸಂಪಾದಿಸುತ್ತಾರೆ, ಆದರೆ ವಿದ್ಯೆ ಕಲಿಸಿದ ಗುರುಗಳು ನಿವೃತ್ತಿ ಅಂಚನ್ನು ತಲುಪಿದರೂ ಕೂಡ ಸ್ವತಃ ಮನೆಯೊಂದನ್ನು ಕಟ್ಟಿಕೊಳ್ಳುವುದು ಸುಲಭವಲ್ಲ. ಆದರೆ ಸಹಕಾರಿ ಕ್ಷೇತ್ರದ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ನಿಯಮಿತವು ಸಾಲ ಹಾಗೂ ನಿವೇಶನ ನೀಡುತ್ತಿರುವುದು ಶ್ಲಾಘನೀಯ. ಈ ಮೂಲಕ ಪ್ರತಿಯೊಬ್ಬ ಶಿಕ್ಷಕರೂ ಸ್ವತಃ ಸೂರನ್ನು ಹೊಂದಲಿ ಎಂದು ಆಶಿಸಿದರು.
ಶಿಕ್ಷಕ ವೃತಿ ಬಹಳ ಪವಿತ್ರವಾದುದ್ದು. ಈ ವೃತ್ತಿಯಿಂದ ಗೌರವ ಸಂಪಾದಿಸಬಹುದೇ ಹೊರೆತು ಬೇರೆ ಸರ್ಕಾರಿ ನೌಕರರಂತೆ ಆದಾಯಕ್ಕಿಂತ ಹೆಚ್ಚು ಸಂಪಾದನೆ ಸಾಧ್ಯವಿಲ್ಲ. ಶಿಕ್ಷಕರು ತಾವು ಗಳಿಸುವ ಆದಾಯದಲ್ಲೇ ಕನಿಷ್ಠ ನಿವೃತ್ತಿಯ ವೇಳೆಗಾದರೂ ತಲೆಯ ಮೇಲೊಂದು ಸೂರು (ಮನೆ) ನಿರ್ಮಿಸಿಕೊಳ್ಳುವಂತಾಗಲಿ ಎಂದರು.

ರಟ್ಟಿಹಳ್ಳಿಯ ಕಬ್ಬಿಣ ಕಂಥಿಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ಸಾನಿಧ್ಯವಹಿಸಿದ್ದರು. ಶಕ್ತಿ ಇನ್ಫ್ರಾಡೆವಲಪರ‍್ಸ್‌ನ ವ್ಯವಸ್ಥಾಪಕ ಡಾ.ವಿ.ಎಂ.ಶಶಿಕುಮಾರ್, ಎಸ್.ಆರ್. ಅಣ್ಣಯ್ಯನವರ್, ನಿಯಮಿತದ ಉಪಾಧ್ಯಕ್ಷ ಎಂ.ಎಸ್.ತಿಮ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…