ಮುಖ್ಯಮಂತ್ರಿಯಾಗಲಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಗೂ ಸೇರಿದಂತೆ ರಾಜ್ಯಕ್ಕೆ ಹೊಸ ಭರವಸೆ ನೀಡಿರುವುದರಿಂದ ಈ ಬಾರಿ ನಾನು ಸೇರಿದಂತೆ ರಾಜ್ಯದಲ್ಲಿ ಅಧಿಕಾರ ಹಿಡಿಯುವಷ್ಟು ಸ್ಥಾನ ಗಳಿಸುತ್ತೇವೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಮುಖವಾಗಿ ಸರ್ಕಾರಿ ನೌಕರರ ಸಮಸ್ಯೆಯಾದ ಹೊಸ ಪಿಂಚಣಿ ವ್ಯವಸ್ಥೆ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತಿರುವುದು, ಅನುದಾನರಹಿತ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರಿಗೆ, ಅತಿಥಿ ಉಪನ್ಯಾಸಕರಿಗೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಭರವಸೆಯನ್ನು ಕುಮಾರಸ್ವಾಮಿ ನೀಡಿದ್ದಾರೆ. ಇದರಿಂದ ಸುಮಾರು 4 ಲಕ್ಷ ನೌಕರರಿಗೆ ಅನುಕೂಲವಾಗುತ್ತದೆ ಎಂದರು.
ಇದರ ಜೊತೆಗೆ ಕಟ್ಟಡ ಕಾರ್ಮಿಕರು, ವಾಹನ ಚಾಲಕರು ಸೇರಿದಂತೆ ಅಸಂಖ್ಯಾತ ಪ್ರಮಾಣದಲ್ಲಿ ಕಾರ್ಮಿಕರಿದ್ದಾರೆ. ಇವರೆಲ್ಲರೂ ಕಷ್ಟಪಟ್ಟು ದುಡಿಯುತ್ತಿದ್ದಾರೆ. ವಿಶೇಷವಾಗಿ ಇವರೆಲ್ಲರ ಹಿತಕ್ಕಾಗಿ ಕಾರ್ಮಿಕ ಕಲ್ಯಾಣ ಮಂಡಳಿ ರಚನೆ ಮಾಡುವುದು, ಇದರ ಜೊತೆಗೆ ವಾಹನ ಚಾಲಕರು ಮತ್ತು ನಿರ್ವಾಹಕರಿಗೂ ಅನುಕೂಲವಾಗುವಂತೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿಯೇ ಸೆಸ್ ಸಂಗ್ರಹಿಸಿವುದು. ಈ ಸೆಸ್ ಹಣದಲ್ಲಿ ಚಾಲಕರ ಅಭಿವೃದ್ಧಿ ಮಾಡಲು ಸಾಧ್ಯ. ಇದರಿಂದ ಸುಮಾರು 40 ಲಕ್ಷ ಅವಲಂಬಿತ ಕಾರ್ಮಿಕರು ಪ್ರಯೋಜನ ಪಡೆಯಲಿದ್ದಾರೆ ಎಂದರು.
ಹಾಗೆಯೇ ಮಧ್ಯಮ ವರ್ಗ ಮತ್ತು ರೈತ ಮಕ್ಕಳು ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಪಡೆದುಕೊಂಡಿದ್ದು, ಅದನ್ನು ಮನ್ನಾ ಮಾಡಲಾಗುವುದು. ಜೊತೆಗೆ ನಿವೃತ್ತ ಸರ್ಕಾರಿ ನೌಕಕರಿಗೆ ಆರೋಗ್ಯ ಸಂಜೀವಿನಿ ಎಂಬ ಹೊಸ ಯೋಜನೆ ಜಾರಿಗೆ ತರಲಾಗುವುದು. ಇದರಿಂದ ನಿವೃತ್ತ ಸರ್ಕಾರಿ ಒಂದಿಷ್ಟು ನೆಮ್ಮದಿಯಾಗಿ ಜೀವನ ಮಾಡಬಹುದಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಹೆದ್ದಾರಿ, ರೈಲ್ವೇ, ವಿಮಾನ ಸೇವೆ ಸೌಲಭ್ಯವಿದ್ದು, ಈ ಸೌಲಭ್ಯ ಬಳಸಿಕೊಂಡು ಜಿಲ್ಲೆಗೆ ಎರಡು ದೊಡ್ಡ ಕೈಗಾರಿಕೆಗಳನ್ನು ತರುವುದಾಗಿ ಹಾಗೂ ಎಂಪಿಎಂ ಮತ್ತು ವಿಐಎಸ್ಎಲ್ ಕಾರ್ಖಾನೆಗಳ ಪುನರ್ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಕಾರ್ಮಿಕರ, ರೈತರ ಮತ್ತು ನೌಕರರ ಸಮೂಹದ ಎಲ್ಲಾ ಬೇಡಿಕೆಗಳನ್ನು ಈಡೇರಿಸಬಲ್ಲ ಓರ್ವ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ನಿನ್ನೆ ನಡೆದ ಬಹಿರಂಗ ಸಭೆ ಯಶಸ್ವಿಯಾಗಿರುವುದರಿಂದ ನನ್ನ ಗೆಲುವಿಗೆ ಪುಷ್ಠಿ ನೀಡಿದಂತಾಗಿದೆ. ಹಾಗೂ ಕುಮಾರಸ್ವಾಮಿ ಅವರ ಭೇಟಿ ಜನಸಾಮಾನ್ಯರಿಗೆ ಲಾಭ ತಂದುಕೊಡುವ ವಿಶ್ವಾಸವಿದೆ ಎಂದರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಬ್ರಾಹ್ಮಣ ಸಮಾಜಕ್ಕೆ ಬೆಂಗಳೂರಿನಲ್ಲಿ ಗಾಯತ್ರಿ ಭವನ ನಿರ್ಮಾಣ ಮಾಡಲು ದೊಡ್ಡ ನಿವೇಶನ ನೀಡಿದ್ದರು. ಅದರಲ್ಲೀಗ ಭವನ ನಿರ್ಮಾಣವಾಗಿದೆ. ಅದೇ ಸಮಯದಲ್ಲೂ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ಒತ್ತಾಯ ಮಾಡಿದ್ದೆ. ಒತ್ತಾಯಕ್ಕೆ ಮಣಿದ ಅವರು ಅಂದು ನಿಗಮ ಸ್ಥಾಪನೆ ಮಾಡಲಾಗಿತ್ತು. ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ನಿಗಮಕ್ಕೆ 100 ಕೋಟಿ ರೂ. ಅನುದಾನ ತೆಗೆದಿಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ಆಚಾರ್ಯತ್ರಯರ ಭವನ ನಿರ್ಮಾಣ ಮಾಡಲಾಗಿದೆ. ಅದರಂತೆಯೇ ಎಲ್ಲಾ ಜಿಲ್ಲೆಗಳಲ್ಲೂ ಆಚಾರ್ಯತ್ರಯರ ಭವನ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬ್ರಾಹ್ಮಣರ ಮತಗಳು ಆಯನೂರು ಮಂಜುನಾಥ್ ಅವರಿಗೆ ದೊರೆಯುತ್ತವೆ. ಅವರು ಗೆಲ್ಲುವುದು ಖಚಿತ. ಅಷ್ಟೇ ಅಲ್ಲ, ಕುಮಾರಸ್ವಾಮಿ ಅವರು ಮತ್ತೊಂದು ಭರವಸೆ ನೀಡಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಆಯನೂರು ಮಂಜುನಾಥ್ ಹಾಗೂ ಶಾರದಾ ಪೂರ್ಯಾನಾಯ್ಕ್ ಅವರಿಗೆ ಸಚಿವ ಸ್ಥಾನ ನೀಡುವುದಾಗಿಯೂ ಆಶ್ವಾಸನೆ ನೀಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮುಖಂಡರಾದ ವೈ.ಹೆಚ್. ನಾಗರಾಜ್, ಮುಕ್ತಿಯಾರ್ ಅಹಮ್ಮದ್, ಭಾಸ್ಕರ್, ದೀಪಕ್ ಸಿಂಗ್, ಸಮೀವುಲ್ಲಾ ಇದ್ದರು.