2022-23ನೇ ಸಾಲಿನ 233 ಮುಂದುವರೆದ ಕಾಮಗಾರಿಗಳು ಮತ್ತು 1137 ಹೊಸ ಕಾಮಗಾರಿಗಳು ಸೇರಿ ಒಟ್ಟು 1370ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರದ ಅನುಮೋದನೆ ದೊರೆತಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಂಡಳಿಯ ಸದಸ್ಯರು ತಮ್ಮ ಪ್ರಸ್ತಾವಿತ ಹೊಸ ಕಾಮಗಾರಿಗಳ ಕ್ರಿಯಾಯೋಜನೆಯನ್ನು ರೂಪಿಸಿ, ಏಜೆನ್ಸಿಯನ್ನು ಗುರುತಿಸಿ ತ್ವರಿತವಾಗಿ ಸಲ್ಲಿಸಿದಲ್ಲಿ ಅವುಗಳನ್ನು ಪರಿಶೀಲಿಸಿ, ಡಿಸೆಂಬರ್ ಮಾಸಾಂತ್ಯದೊಳಗಾಗಿ ಅನುಮೋದನೆ ನೀಡಲಾಗುವುದು. ಕೈಗೊಳ್ಳುವ ಯೋಜನೆಗಳನ್ನು ಮಾರ್ಚ್ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಈ ಎಲ್ಲಾ ಕಾಮಗಾರಿಗಳ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ ಎಂದವರು ತಿಳಿಸಿದರು.
ಈ ಹಿಂದೆ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ಮಂಡಳಿಯ 65ವಿಧಾನ ಸಭಾ ಮತ್ತು 21ವಿಧಾನ ಪರಿಷತ್ ಸೇರಿದಂತೆ ಒಟ್ಟು 86ಶಾಸಕರುಗಳಿಂದ ತಲಾ 33ಲಕ್ಷದಂತೆ ಕ್ರಿಯಾ ಯೋಜನೆ ಪ್ರಸ್ತಾವನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರವು 86 ಶಾಸಕರಿಗೆ ತಲಾ 1ಕೋಟಿಯಂತೆ 86ಕೋಟಿಗಳಿಗೆ ಹಾಗೂ ಶೇ.20ರಷ್ಟು ಹೆಚ್ಚುವರಿ ಕ್ರಿಯಾ ಯೋಜನೆ ರೂಪಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಸರ್ಕಾರಕ್ಕೆ ಸಲ್ಲಿಸಲಾದ ಒಟ್ಟು 102.53ಕೋಟಿ ರೂ.ಗಳ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದರು.
ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಪ್ರಸ್ತಾವನೆಗೆ ಅನುಮೋದನೆ ನೀಡಿದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, ಈ ವಿಷಯದ ಕುರಿತು ಈ ಹಿಂದೆ ಮಾನ್ಯ ಮುಖ್ಯಮಂತ್ರಿಗಳಿಗೆ 2ಬಾರಿ ಭೇಟಿ ಮಾಡಿ ಸಮಾಲೋಚನೆ ನಡೆಸಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರು ಮಾತನಾಡಿ, ಮಲೆನಾಡು ಭಾಗದ ಜಿಲ್ಲೆಗಳಿಂದ ರಾಜ್ಯ ಸರ್ಕಾರಕ್ಕೆ ಸಂದಾಯವಾಗಿರುವ ರಾಜಸ್ವದ ಕುರಿತು ಸರ್ಕಾರದ ಗಮನಸೆಳೆದು, ಈ ಹಿಂದೆ ಸಲ್ಲಿಸಿದ ಪ್ರಸ್ತಾವನೆಯ ಮೊತ್ತಕ್ಕಿಂತ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದ ಅವರು, ಈ ಕುರಿತು ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯಲು ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಮಂಡಳಿಯ ಸರ್ವ ಸದಸ್ಯರ ಸಭೆ ಕರೆದು ಸಮಾಲೋಚನೆ ನಡೆಸುವಂತೆಯೂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಎಸ್.ಗುರುಮೂರ್ತಿ ಅವರು ಮಾತನಾಡಿ, ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನ ಸಕಾಲದಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ. ಶಾಸಕರು ಕಾಮಗಾರಿಗಳ ಕ್ರಿಯಾಯೋಜನೆ ಸಲ್ಲಿಸದಿರುವುದು, ಹಳೆಯ ಕಾಮಗಾರಿಗಳಿಗೆ ಅನುದಾನ ಬಳಸಿಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದ ಅವರು, ಸರ್ವ ಸದಸ್ಯರು ಸಕಾಲದಲ್ಲಿ ಸಭೆಗೆ ಆಗಮಿಸಿ, ಉತ್ತಮ ಸಲಹೆ ಸೂಚನೆಗಳನ್ನು ನಿಡುವಂತೆ ಮನವಿ ಮಾಡಿದರು. ಸಣ್ಣ ಮೊತ್ತದ ಹೆಚ್ಚಿನ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಕ್ಕಿಂತ ಕನಿಷ್ಟ 5ಲಕ್ಷ ರೂ.ಗಳ ಮೇಲ್ಪಟ್ಟ ಮೊತ್ತದ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಪ್ರೊ.ಲಿಂಗಣ್ಣ ಮಾಯಕೊಂಡ, ಕೆ.ಬಿ.ಅಶೋಕನಾಯ್ಕ್, ಕುಮಾರ ಬಂಗಾರಪ್ಪ, ಸಿ.ಎಂ.ನಿಂಬಣ್ಣ ಕಲಘಟಗಿ, ತಿಮ್ಮಯ್ಯ ಚಾಮರಾಜನಗರ, ವಿರೂಪಾಕ್ಷಪ್ಪ ಬ್ಯಾಡಗಿ, ಡಿ.ಎಸ್.ಅರುಣ್, ಮಂಡಳಿಯ ನಾಮನಿರ್ದೇಶಿತ ಸದಸ್ಯರು, ಆಡಳಿತಾಧಿಕಾರಿ ಕೆ.ಎಸ್.ಮಣಿ ಮತ್ತಿತರರು ಉಪಸ್ಥಿತರಿದ್ದರು.