ಮಂಜುನಾಥ್ ಶೆಟ್ಟಿ…
ಗೃಹಲಕ್ಷಿö್ಮ ಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳ ಹೆಸರಿಗೆ ಹಣ ವರ್ಗಾವಣೆಯಾಗುತ್ತಿದ್ದು, ಮನೆಯ ಮುಂದಿನ ಯಜಮಾನಿಯರು ಈ ಬಗ್ಗೆ ತಿಳಿಸಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ಮಧು ಹೆಚ್ ಎಂ ತಿಳಿಸಿದರು.
ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮರಣ ಹೊಂದಿರುವ ಫಲಾನುಭವಿಗಳ ಖಾತೆಯ ಕುರಿತು ಮಾಹಿತಿ ನೀಡಿ, ಮನೆಯ ಮುಂದಿನ ಯಜಮಾನಿಯರು ಸೌಲಭ್ಯ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಮರಣ ಹೊಂದಿರುವ ವ್ಯಕ್ತಿಯ ಜೀವಂತ ಪ್ರಮಾಣ ಪತ್ರ ಸಲ್ಲಿಸುವ ಬಗ್ಗೆ ಯಾವುದೇ ರೀತಿಯ ಆತಂಕ ಬೇಡ. ಸರ್ಕಾರದ ಆದೇಶ/ಸುತ್ತೋಲೆ ಬಂದ ನಂತರ ಕ್ರಮ ವಹಿಸಬಹುದು ಎಂದರು.
ಗೃಹಲಕ್ಷಿö್ಮ ಯೋಜನೆಯಡಿ ತಾಲ್ಲೂಕಿನಲ್ಲಿ ಜನವರಿ ಮಾಹೆವರೆಗೆ 107841 ಮಹಿಳೆಯರು ನೋಂದಣಿಯಾಗಿದ್ದು, 2044 ಫಲಾನುಭವಿಗಳು ಐಟಿ/ಜಿಎಸ್‌ಟಿ ಎಂದು ಪರಿಣಗಣಿಸಲಾಗಿದೆ. ಈ ಬಗ್ಗೆ ಪರಿಶೀಲಿಸಲು 304 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಹಾಗೂ 42 ಫಲಾನುಭವಿಗಳಿಗೆ ಎನ್‌ಪಿಸಿಐ ಬಾಕಿ ಇದ್ದು ಪರಿಶೀಲಿಸಲಾಗುತ್ತಿದೆ. ಹಾಗೂ ನವೆಂಬರ್ ಮಾಹೆವರೆಗೆ ಹಣವನ್ನು ಜಮಾ ಮಾಡಲಾಗಿದೆ.
ತಾಲ್ಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಫೆಬ್ರವರಿವರೆಗೆ 54147 ಬಿಪಿಎಲ್ ಪಡಿತರ ಚೀಟಿದಾರರು ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. 5 ವರ್ಷದಿಂದ ಇಕೆವೈಸಿ ಮಾಡಿಸದೇ ಇರುವ ಪಡಿತರದಾರರು ಇಕೆವೈಸಿ ಮಾಡಿಸಿ ಪಡಿತರ ಪಡೆಯಬೇಕು. ಬಿಪಿಎಲ್ ಕಾರ್ಡ್ ರದ್ದಾಗಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಯಾಗಿರುವ ಪಡಿತರದಾರರು ನಿಗದಿತ ದಾಖಲೆಗಳಾದ 2 ರಿಂದ 3 ವರ್ಷಗಳ ಐಟಿ ರಿಟರ್ನ್ಸ್ ದಾಖಲೆ, ಪಡಿತರ ಚೀಟಿ ಜೆರಾಕ್ಸ್, ಆದಾಯ ಪ್ರಮಾಣ ಪತ್ರಗಳನ್ನು ನೀಡಿ ಮರು ಅರ್ಜಿ ಸಲ್ಲಿಸಬಹುದಾಗಿದ್ದು, ಇದನ್ನು 1 ರಿಂದ 2 ವಾರದಲ್ಲಿ ಪರಿಶೀಲಿಸಲಾಗುವುದು ಎಂದ ಅವರು ಇತ್ತೀಚಿಗೆ 15 ರಿಂದ 20 ಎಪಿಎಲ್ ಕಾರ್ಡ್ಗಳನ್ನು ಬಿಪಿಎಲ್ ಗೆ ಪರಿವರ್ತಿಸಲಾಗಿದೆ ಎಂದರು.
ಯುವನಿಧಿ ಯೋಜನೆಯಡಿ ಇಲ್ಲಿಯವರೆಗೆ 11499 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಡಿಸೆಂಬರ್ ಮಾಹೆವರೆಗೆ ರೂ.1,02,46,500 ಹಣ ನೀಡಲಾಗಿದೆ. ಗೃಹಜ್ಯೋತಿ ಯಶಸ್ವಿಯಾಗಿ ಜಾರಿಯಾಗಿದ್ದು, 177290 ಫಲಾನುಭವಿಗಳಿಗೆ ರೂ.1080678819 ಸಬ್ಸಿಡಿ ನೀಡಲಾಗಿದೆ. ಶಕ್ತಿ ಯೋಜನೆಯಡಿ ಈವರೆಗೆ ತಾಲ್ಲೂಕಿನಲ್ಲಿ 25437543 ಬಾರಿ ಮಹಿಳೆಯರು ಪ್ರಯಾಣಿಸಿದ್ದು ಶೇ.63.3 ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿರುತ್ತಾರೆ. ಶೇ.38.2 ಆದಾಯ ಮಹಿಳಾ ಪ್ರಯಾಣಿಕರಿಂದ ಲಭಿಸಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯರು, ತಾಲ್ಲೂಕು ಇಓ ಪರಮೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.