ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಭದ್ರಾವತಿ 2041ರ ಮಾಸ್ಟರ್ ಪ್ಲಾನ್ ಕರಡು ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಸಿದ್ಧಪಡಿಸಲಾಗಿದ್ದು ವೆಬ್ಸೈಟ್ ನಲ್ಲಿ ಪ್ರಕಟಿಸದೇ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲದಂತಾಗಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಸ್ಟರ್ ಪ್ಲಾನ್ನ ಸಂಪೂರ್ಣ ವರದಿ ಕರಡು ನಕ್ಷೆ ಹಾಗೂ ಪಿಡಿಎಫ್ ಪ್ರತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತಾಗಬೇಕೆಂದರು.
ಮಹಾಯೋಜನೆ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಆಕ್ಷೇಪಣೆ ಸಲಹೆಗಳನ್ನು ಪರಿಗಣಿಸಿದ ಬಳಿಕವೇ ಅಂತಿಮ ಕರಡು ಸಿದ್ದಗೊಳಿಸಬೇಕು ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದೆಂದು ಎಚ್ಚರಿಕೆ ನೀಡಿದರು.
ಮಹಾಯೋಜನೆ–2031ರಲ್ಲಿ 200 ಅಡಿ ರಸ್ತೆಯ ಪಕ್ಕದಲ್ಲಿ ಪ್ರಸ್ತಾಪಿಸಿದ್ದ ಆರು ಪ್ರಾದೇಶಿಕ ಉದ್ಯಾನಗಳ ಪೈಕಿ ಹಲವು ಯೋಜನೆಗಳನ್ನು ಕೈಬಿಟ್ಟಿರುವುದು ಅಥವಾ ಬದಲಾಯಿಸಿರುವುದಕ್ಕೆ ವಿರೋಧವಿದೆ ಎಂದು ಹೇಳಿದರು.
ನಗರದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ 200 ಅಡಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಬೈಪಾಸ್ಗೆ ಸೇರಿಸಿರುವುದರಿಂದ ವರ್ತುಲ ರಸ್ತೆ ನಿರ್ಮಾಣದ ಉದ್ದೇಶವೇ ವಿಫಲವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೋಟೆ–ಗಂಗೂರು ರೈಲ್ವೆ ಹಳಿ ದಾಟಿದ ಬಳಿಕ ಖಜಾನೆ ಬಡಾವಣೆ ಮೂಲಕ ಹಾದುಹೋಗಬೇಕಿದ್ದ 200 ಅಡಿ ರಸ್ತೆ ಹಾಗೂ ಬಿ.ಆರ್. ರಸ್ತೆಯಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ದಾಟಿ ಅನುಪಿನಕಟ್ಟೆಯವರೆಗಿನ ವರ್ತುಲ ರಸ್ತೆ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ದೂರಿದರು.
ಎಪಿಎಂಸಿ ಹಿಂಭಾಗದ ಶ್ರೀಗಂಧ ಕಾವಲು ಪ್ರದೇಶದ ಹಾಲಕೊಳದಲ್ಲಿರುವ ಅರಣ್ಯ ಇಲಾಖೆಯ ಸುಮಾರು 12.50 ಎಕರೆ ಜಾಗವನ್ನು ಹಸಿರು ವಲಯದ ಬದಲಿಗೆ ಸಾರ್ವಜನಿಕ ವಲಯವೆಂದು ಗುರುತಿಸಲಾಗಿದೆ.
ಇದಕ್ಕೆ ನಮ್ಮ ವಿರೋಧವಿದೆ. ತಾವರೆಚನ್ನಹಳ್ಳಿ ಒಳಚರಂಡಿ ಸಂಸ್ಕರಣಾ ಘಟಕದ ಪಕ್ಕದ ಪ್ರದೇಶವನ್ನೂ ಹಸಿರು ವಲಯದಿಂದ ಸಾರ್ವಜನಿಕ ಪ್ರದೇಶವನ್ನಾಗಿ ಬದಲಾಯಿಸಲಾಗಿದೆ.
ಜ್ಞಾನನಗರಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೈಬಿಟ್ಟಿರುವುದು ಹಾಗೂ ವಿನೋಬನಗರ ಎರಡನೇ ಹಂತದ ಸಿ.ಎ. ನಿವೇಶನಕ್ಕೆ ಸಂಬಂಧಿಸಿದ ಪ್ರಸ್ತಾವನೆಯ ಬಗ್ಗೆಯೂ ಆಕ್ಷೇಪಣೆ ಇದೆ ಎಂದರು.
ಉದ್ಯಾನಗಳಲ್ಲಿ ನಿರ್ಮಿಸಿರುವ ಕಟ್ಟಡಗಳನ್ನೂ ಹಸಿರು ಪ್ರದೇಶದ ಭಾಗವಾಗಿ ಪರಿಗಣಿಸಿರುವುದರಿಂದ ವಾಸ್ತವಿಕ ಹಸಿರು ಪ್ರದೇಶಕ್ಕಿಂತ ಹೆಚ್ಚಿನ ಪ್ರಮಾಣ ತೋರಿಸಲಾಗಿದೆ. ನಗರದ ನೈಜ ಹಸಿರು ಪ್ರದೇಶವು ಒಟ್ಟು ವಿಸ್ತೀರ್ಣದ ಶೇ 5ಕ್ಕಿಂತ ಕಡಿಮೆ ಇರಬಹುದು ಎಂದರು.
ಈ ಸಂದರ್ಭದಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಶೆಟ್ಟಿ , ಕೇಶವ ಮೂರ್ತಿ, ಮಹಮದ್ ಇಕ್ಬಾಲ್, ನಾಗರಾಜ್, ಭಾಸ್ಕರ್ ಶೆಟ್ಟಿ, ಪರಿಸರಕ್ಕಾಗಿ ನಾವು ಜನಾರ್ಧನ್ ಪೈ, ಚನ್ನವೀರಪ್ಪ ಗಮನಗಟ್ಟಿ,ಆನಂದ್, ತಿಮ್ಮಣ್ಣ, ಗೌರೀಶ್ ಭಾರ್ಗವ್ ಹಾಜರಿದ್ದರು.