ಮಂಜುನಾಥ್ ಶೆಟ್ಟಿ…
ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆಯಲ್ಲಿದ್ದು ನಿರಾಸೆ ಹೊಂದಿದ್ದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸರ್ಕಾರದಲ್ಲಿ ಉನ್ನತ ಸ್ಥಾನ ದೊರೆತಿದೆ. ಕೆಪಿಸಿಸಿ ಶಿ-ರಸ್ ಮಾಡಿ ಮುಖ್ಯಮಂತ್ರಿಗಳಿಗೆ ರವಾನಿಸಿದ ಪಟ್ಟಿಯಲ್ಲಿ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲ ಕೃಷ್ಣ ಅವರಿಗೆ ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ (ಗವರ್ನಮೆಂಟ್ ಚೀಫ್ ವಿಪ್) ಹುದ್ದೆಯನ್ನು ನೀಡಲಾಗಿದೆ. ಇತ್ತ ವಿಧಾನಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಅವರನ್ನು ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಆಯ್ಕೆ ಮಾಡಲಾಗಿದೆ.
ಶಿವಮೊಗ್ಗದ ಇಬ್ಬರು ಪ್ರಭಾವಿ ನಾಯಕರಿಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ಗಳಲ್ಲಿ ಕಾರ್ಯ ನಿರ್ವಹಿಸುವ ಉತ್ತಮ ಹುದ್ದೆಯನ್ನೇ ನೀಡಲಾಗಿದೆ. ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರಾಗಿ ಆಯ್ಕೆಯಾದ ಬೇಳೂರು ಗೋಪಾಲ ಕೃಷ್ಣ ಅವರು ವಿಧಾನಸಭೆಯ ಕಲಾಪಗಳಲ್ಲಿ ಆಡಳಿತ ಪಕ್ಷದ ಶಾಸಕರ ಹಾಜರಿ ಮತ್ತು ಶಿಸ್ತು ಕಾಪಾಡುವುದು, ಮಸೂದೆ ಹಾಗೂ ಮಹತ್ವದ ಮತದಾನದ ವೇಳೆ ವಿಪ್ ಜಾರಿಗೊಳಿಸಿ ಪಾಲನೆಯ ಮೇಲೆ ನಿಗಾ ಇಡುವುದು, ಪ್ರತಿಪಕ್ಷಗಳ ತಂತ್ರಗಳಿಗೆ ಸಮರ್ಥವಾಗಿ ತಿರುಗೇಟು ನೀಡಲು ಹಾಗೂ ಸರ್ಕಾರದ ಯೋಜನೆಗಳನ್ನು ಮಂಡಿಸಲು ಶಾಸಕರಿಗೆ ಮಾರ್ಗದರ್ಶನ ನೀಡುವುದು ಮತ್ತು ಸಭಾಧ್ಯಕ್ಷರು, ಸರ್ಕಾರ ಹಾಗೂ ಶಾಸಕರ ನಡುವೆ ಸಮನ್ವಯ ಸಾಧಿಸುವ ಕೆಲಸ ಮಾಡಬೇಕಿದೆ.
ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾಗಿರುವ ಮಂಜುನಾಥ್ ಭಂಡಾರಿ ಅವರು ವಿಧಾನ ಪರಿಷತ್ತಿನ ಕಲಾಪಗಳಲ್ಲಿ ಪಕ್ಷದ ಸದಸ್ಯರು ಸಕ್ರಿಯವಾಗಿ ಹಾಜರಿರುವಂತೆ ನೋಡಿಕೊಳ್ಳುವುದು, ಮೇಲ್ಮನೆಯಲ್ಲಿ ಮಸೂದೆ ಅಥವಾ ವಿಷಯಗಳ ಮತದಾನದ ಸಂದರ್ಭದಲ್ಲಿ ಸದಸ್ಯರಿಗೆ ವಿಪ್ ನೀಡುವುದು, ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಸದಸ್ಯರೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಸಭಾಪತಿಗಳು, ಸರ್ಕಾರ ಹಾಗೂ ಪರಿಷತ್ ಸದಸ್ಯರ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವ ಹಿಸುವ ಕೆಲಸ ನಿರ್ವಹಿಸಬೇಕಿದೆ. ಇನ್ನೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ತನ್ವೀರ್ ಸೇಠ್ ಅವರನ್ನು ನೇಮಕ ಮಾಡಲಾಗಿದೆ.