ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ನ್ಯಾಯಾಲಯದ ಹೊರಗೆ ಕಡಿಮೆ ವೆಚ್ಚ ಮತ್ತು ಕಡಿಮೆ ಸಮಯದಲ್ಲಿ ಪರಸ್ಪರ ಒಪ್ಪಿಗೆಯ ಪರಿಹಾರ ಕಂಡುಕೊಳ್ಳಲು ನೆರವಾಗುವ ಅನುಸಂಧಾನ ಪ್ರಕ್ರಿಯೆ, ಸಂಘರ್ಷಕ್ಕಿಂತ ಸಮನ್ವಯಕ್ಕೆ ಆದ್ಯತೆ ನೀಡಲಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರವಿ ವಿ. ಹೊಸಮನಿ ಅಭಿಪ್ರಾಯಪಟ್ಟರು.

ನಗರದ ಸಿ. ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಜ್ಯಮಟ್ಟದ ದ್ವಿತೀಯ ಅನುಸಂಧಾನ ಸ್ಪರ್ಧೆ–2026ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅನುಸಂಧಾನದ ಅಗತ್ಯವಿದೆ. ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಕಷ್ಟವಾಗುವ ಕೆಲವು ವಿಚಾರಗಳಿಗೂ ಇಲ್ಲಿ , ಪರಸ್ಪರ ಒಪ್ಪಿಗೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದಕ್ಕೆ ತಾಳ್ಮೆ ಮತ್ತು ಪರಿಣಾಮಕಾರಿ ಸಂವಹನ ಕೌಶಲ್ಯ ಅತ್ಯಗತ್ಯ ಎಂದರು.

ಅನುಸಂಧಾನ ಎಂದರೆ ಕೇವಲ ವಿವಾದವೊಂದನ್ನು ಅಂತ್ಯಗೊಳಿಸುವುದಲ್ಲ, ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಯುವ ಪ್ರಕ್ರಿಯೆಯೂ ಹೌದು. ವಕೀಲರು ತಮ್ಮ ಕಕ್ಷಿದಾರರ ಉದ್ದೇಶಗಳನ್ನು ಸ್ಪಷ್ಟವಾಗಿ ಅರಿತು, ಅನುಸಂಧಾನಕ್ಕೆ ಮುನ್ನ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಸಮಸ್ಯೆಯ ಪರಿಹಾರಕ್ಕೆ ಇರುವ ಉತ್ತಮ ಹಾಗೂ ಪರ್ಯಾಯ ಮಾರ್ಗಗಳನ್ನು ವಿಶ್ಲೇಷಿಸಬೇಕು. ಪರಸ್ಪರ ಸ್ವತಂತ್ರ ಒಪ್ಪಿಗೆ ಅನುಸಂಧಾನದ ಪ್ರಮುಖ ಅಂಶವಾಗಿದ್ದು, ಆತುರಕ್ಕಿಂತ ತಾಳ್ಮೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ವಕೀಲ ವೃತ್ತಿಯಲ್ಲಿ ಹಣ ಗಳಿಕೆಯಷ್ಟೇ ಮುಖ್ಯವಲ್ಲ, ನೈತಿಕವಾಗಿ ಕಾರ್ಯನಿರ್ವಹಿಸುವುದರಿಂದ ದೊರೆಯುವ ವೃತ್ತಿ ತೃಪ್ತಿಯೂ ಮಹತ್ವದ್ದಾಗಿದೆ. ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವವರಾಗಿ ವಕೀಲರು ರೂಪುಗೊಳ್ಳಬೇಕು. ಅನುಸಂಧಾನದ ಮಹತ್ವವನ್ನು ಕಕ್ಷಿದಾರರಿಗೆ ಮನವರಿಕೆ ಮಾಡಿಕೊಟ್ಟು, ನ್ಯಾಯಯುತ ಪರಿಹಾರ ಕಲ್ಪಿಸುವ ಮೂಲಕ ವೃತ್ತಿಯ ಘನತೆಯನ್ನು ಉಳಿಸಬೇಕು ಎಂದು ಕರೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ನ್ಯಾಯಾಲಯ ಎಂದಾಕ್ಷಣ ವಾದ-ಪ್ರತಿವಾದಗಳು ನೆನಪಾಗುತ್ತವೆ. ಆದರೆ ಬದಲಾಗುತ್ತಿರುವ ಜಾಗತಿಕ ವ್ಯವಹಾರಿಕ ಪರಿಸರದಲ್ಲಿ ಯಾರೂ ಸಂಪೂರ್ಣ ಸೋಲಿನೊಂದಿಗೆ ಹೊರಬರಲು ಬಯಸುವುದಿಲ್ಲ.

ಕಾನೂನು ಪ್ರಕ್ರಿಯೆಯಲ್ಲಿ ಕಾರ್ಯವಿಧಾನದ ಹಕ್ಕುಗಳು ಅಗತ್ಯವಾದರೂ, ಅದೇ ಪ್ರಕ್ರಿಯೆ ಶಿಕ್ಷೆಯಾಗಿ ಪರಿಣಮಿಸಿದಾಗ ಅವುಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸೇತುವೆಯಾಗಿ ಅನುಸಂಧಾನ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ನೈತಿಕತೆ, ಸಹಾನುಭೂತಿ ಮತ್ತು ಪೂರ್ವಸಿದ್ಧತೆಯ ಅರಿವು ಅಗತ್ಯ. ಸಮಸ್ಯೆಯನ್ನು ಮತ್ತಷ್ಟು ಬೆಳೆಸುವುದಕ್ಕಿಂತ ಪರಿಹಾರದತ್ತ ಕೊಂಡೊಯ್ಯುವ ಮನೋಭಾವ ಕಾನೂನು ಪದವೀಧರರಲ್ಲಿ ಬೆಳೆಯಬೇಕು. ಪ್ರತಿಯೊಬ್ಬರಿಗೂ ನೀತಿಯುತ ನ್ಯಾಯ ದೊರೆಯುವಂತಾಗಬೇಕು ಎಂದರು.


ಬೆಳಗಾವಿಯ ಬಿ.ವಿ. ಬೆಲ್ಲದ್ ಕಾನೂನು ಕಾಲೇಜು ಪ್ರಥಮ

ರಾಜ್ಯಮಟ್ಟದ ದ್ವಿತೀಯ ಅನುಸಂಧಾನ ಸ್ಪರ್ಧೆಯಲ್ಲಿ ಬೆಳಗಾವಿಯ ಬಿ.ವಿ. ಬೆಲ್ಲದ್ ಕಾನೂನು ಮಹಾವಿದ್ಯಾಲಯದ ತಂಡ ಪ್ರಥಮ ಬಹುಮಾನ ಗಳಿಸಿತು. ಮೈಸೂರಿನ ವಿದ್ಯಾ ವಿಕಾಸ ಕಾನೂನು ಕಾಲೇಜಿನ ತಂಡ ದ್ವಿತೀಯ ಬಹುಮಾನ ಹಾಗೂ ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ತಂಡ ವಿಶೇಷ ಪ್ರಶಂಸನಾ ಬಹುಮಾನ ಪಡೆದುಕೊಂಡಿತು. ರಾಜ್ಯದ ವಿವಿಧ ಕಾನೂನು ಕಾಲೇಜುಗಳ 20 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಅನುಸಂಧಾನ ಕೌಶಲ್ಯವನ್ನು ಪ್ರಸ್ತುತ ಪಡಿಸಿದವು.


ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಅನಲ ಅಧ್ಯಕ್ಷತೆ ವಹಿಸಿದ್ದರು. ಎನ್ಇಎಸ್ ನಿರ್ದೇಶಕರಾದ ಎಂ.ಎಸ್. ಅನಂತದತ್ತ, ಗೋವಾದ ವಿ.ಎಂ. ಸಲಗಾಂವ್ಕರ್ ಕಾನೂನು ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಬಿ.ಎಸ್. ಪಾಟೀಲ್, ಭರತ್ ಕುಮಾರ್ ಮೆಹ್ತಾ, ವಕೀಲ ಮಧುಸೂದನ್ ಜಿ, ಐಕ್ಯೂಎಸಿ ಸಂಯೋಜಕರಾದ ಡಾ. ಕಾಂತರಾಜ್, ಸಂಯೋಜಕರಾದ ಸೌಮ್ಯ ಎಚ್, ಮೇಘ ವಿಜಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *