ಮಂಜುನಾಥ್ ಶೆಟ್ಟಿ…
ಸ್ವಾತಂತ್ರ್ಯಾ ನಂತರ 7-8 ದಶಕಗಳು ಉರುಳಿದರೂ ದೇಶದಲ್ಲಿ ಜೀತಪದ್ದತಿಯಂತಹ ಅನಿಷ್ಠ ಅಸ್ತಿತ್ವದಲ್ಲಿರುವುದು ಅತ್ಯಂತ ನೋವಿನ ಸಂಗತಿ ಮಾತ್ರವಲ್ಲ ನಾಗರೀಕ ಸಮಾಜ ತಲೆತಗ್ಗಿಸುವಂತದ್ದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ಜಿ.ಎ. ಅವರು ಹೇಳಿದರು.
ಅವರು ನಗರದ ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಮುಕ್ತಿ ಅಲಯನ್ಸ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜೀತಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಬೆಳವಣಿಗೆಗೆ ಕಳಂಕ ಮತ್ತು ಮಾರಕವಾಗಿದ್ದ ಈ ಪಿಡುಗನ್ನು ನಿರ್ಮೂಲನೆಗೊಳಿಸಲು 1976ರಲ್ಲಿಯೇ ಸರ್ಕಾರ ಕಾಯ್ದೆಯನ್ನು ಅನುಷ್ಟಾನಗೊಳಿಸಿದೆ. ಆದಾಗ್ಯೂ ಈ ಅನಿಷ್ಟ ನಾಗರೀಕ ಸಮಾಜದಲ್ಲಿಯೇ ಅಸ್ತಿತ್ವದಲ್ಲಿರುವುದು ದುರಂತ ಎಂದವರು ನುಡಿದರು.
ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಬೀದರ್‌ನಂತಹ ಜಿಲ್ಲಾ ಕೇಂದ್ರಗಳಲ್ಲಿಯೇ ಈ ಜೀತಪದ್ದತಿ ಇನ್ನೂ ಜೀವಂತವಾಗಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ 8800ಕ್ಕೂ ಹೆಚ್ಚಿನ ಪ್ರಕರಣಗಳು ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆಗಾಗಿ ಬಾಕಿ ಇವೆ ಎಂದರು.
ವ್ಯಕ್ತಿಯ ಕನಿಷ್ಟ ಆಲೋಚನೆ ಮತ್ತು ಮಾನಸಿಕ ಗುಲಾಮತನ ಜೀತಪದ್ದತಿಯ ಜೀವಂತವಾಗಿರುವುದಕ್ಕೆ ಕಾರಣವಾಗಿದೆ.ಮಾಡಿದ ಕೆಲಸಕ್ಕೆ ಸರಿಯಾದ ಕೂಲಿ ಕೊಡದೆ, ಶ್ರಮಕ್ಕೆ ತಕ್ಕ ಬೆಲೆ ಕೊಡದೆ ಅತ್ಯಂತ ಕನಿಷ್ಟವಾಗಿ ದುಡಿಸಿಕೊಳ್ಳುವ ಕೆಟ್ಟ ಪದ್ದತಿ ಇದಾಗಿದೆ. ಪೋಷಕರ ಬಡತನ, ಅನಕ್ಷರತೆ ಮತ್ತು ಉಳ್ಳವರೊಂದಿಗೆ ಮಾಡಿಕೊಂಡ ಸಾಲ ಜೀತಪದ್ದತಿಯ ಉಳಿವಿಗೆ ಕಾರಣವಾಗಿದೆ ಎಂದ ಅವರು, ಇದರ ನಿರ್ಮೂಲನೆಗೆ ಜವಾಬ್ದಾರಿಯುತ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಎಂ.ಎಸ್., ಅವರು ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಕಳೆದ ಒಂದು ದಶಕದಿಂದೀಚೆಗೆ ಜೀತಪದ್ದತಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿಲ್ಲದಿರುವುದು ಅಥವಾ ಕಂಡುಬಾರದಿರುವುದು ಸಮಾಧಾನದ ಸಂಗತಿಯಾಗಿದೆ. ಜೀತಪದ್ದತಿ ಕಾನೂನು ದೇಶದಲ್ಲಿ ಜಾರಿಗೆ ಬಂದು ಸರಿಯಾಗಿ 50ವರ್ಷಗಳೇ ಸಂದಿವೆ. ಇಂತಹ ಸಂದರ್ಭದಲ್ಲಿ ಕಳೆದ ವರ್ಷವೊಂದರಲ್ಲಿ 148ಜೀತಕುಟುಂಬಗಳನ್ನು ಗುರುತಿಸಿ, ಅವರಿಗೆ ಪುನರ್ ವಸತಿ ಕಲ್ಪಿಸಿ, ಸಮಾಜದ ಮುಖ್ಯವಾಹಿನಿಗೆ ಕರೆತರಲಾಗಿದೆ ಎಂದರು.
ಕಲ್ಲುಕ್ವಾರಿ ಮತ್ತು ಇಟ್ಟಿಗೆ ಗುಮ್ಮಿಗಳಲ್ಲಿ ಜೀತಪದ್ದತಿಯಡಿ ಜೀವನ ನಿರ್ವಹಿಸುತ್ತಿರುವ ಅನೇಕ ಪ್ರಕರಣಗಳನ್ನು ಗುರುತಿಸಲಾಗಿದೆ. ಅದಕ್ಕಾಗಿ ಸ್ಥಳೀಯವಾಗಿರುವ 13 ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಸಮಸ್ಯೆ ಸಕಾಲಿಕ ಪರಿಹಾರ ನೆರವು ಒದಗಿಸಲು ಹಾಗೂ ತಕ್ಷಣದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿ ರಮೇಶಕುಮಾರ್ ತಿಳಿಸಿದರು.
ಮನೆಮನೆ ಭೇಟಿ ಕಾರ್ಯಕ್ರಮದ ವ್ಯವಸ್ಥಿತ ಅನುಷ್ಟಾನದಿಂದಾಗಿ ಪೊಲೀಸ್ ಜನಸ್ನೇಹಿಯಾಗಿ ಗುರುತಿಸಿಕೊಳ್ಳುತ್ತಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಕೇಳಿಬರುತ್ತಿದೆ. ಇದರಿಂದ ಸಿಬ್ಬಂಧಿಗಳ ಕಾರ್ಯದಲ್ಲಿ ಸಹಜವಾಗಿ ಉತ್ಸಾಹ ಕಂಡುಬರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಹೆಚ್ಚುವರಿ ರಕ್ಷಣಾಧಿಕಾರಿ ರಮೇಶ್‌ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರಸ್ವಾಮಿ, ಮುಕ್ತಿ ಅಲಯನ್ಸ್‌ನ ಸದಸ್ಯ ಎಸ್.ಹೆಚ್.ಚೌಡಪ್ಪ, ಸಂಯೋಜಕ ರಾಜೇಂದ್ರ, ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ, ಬಾಲಕಾರ್ಮಿಕ ಯೋಜನಾಧಿಕಾರಿ ರಘು, ಶ್ರೀಮತಿ ಸುಖಿತಾ ಮತ್ತಿತರರು ಉಪಸ್ಥಿತರಿದ್ದರು.