ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಯಡಮನೆ ಗ್ರಾಮದ ರೈತಾಪಿ ಕುಟುಂಬಗಳಿಗೆ ಅರಣ್ಯ ಇಲಾಖೆ ನೊಟೀಸ್ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣವೇ ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದೇನೆ. ಹೀಗಾಗಿ ಆತಂಕ ಬೇಡ ಎಂದು ಜಿಲ್ಲಾ ಉಸ್ತುವಾರಿಯೂ ಆದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಈ ನೊಟೀಸ್‌ಗಳು 2012-13ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳು. ಹಳೆಯ ಆದೇಶದ ಅನ್ವಯ ಈಗ ಜಾರಿಯಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ,

ನಮ್ಮ (ಕಾಂಗ್ರೆಸ್) ಸರ್ಕಾರವು ರೈತರನ್ನು ಒಕ್ಕಲೆಬ್ಬಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ನಾನು ದೃಢವಾಗಿ ಹೇಳಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಈಗಾಗಲೇ ನಾನು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡಿದ್ದು, ಯಾವುದೇ ಕಾರಣಕ್ಕೂ ರೈತರನ್ನು ಬಲವಂತವಾಗಿ ತೆರವುಗೊಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.

ಅರಣ್ಯ ಹಕ್ಕು ಕಾಯ್ದೆಯಡಿ ಅವರು ಅರ್ಜಿ ಸಲ್ಲಿಸಿದ್ದರೂ ಸೂಕ್ತ ದಾಖಲಾತಿಗಳು ಇಲ್ಲದ ಕಾರಣ ಇವರ ಅರ್ಜಿಗಳು ಇನ್ನೂ ಊರ್ಜಿತವಾಗಿಲ್ಲ. ಈ ಕುರಿತು ಸಂಬಂಧಪಟ್ಟ ಸಮಿತಿಗಳು ಮೇಲ್ಮನವಿ ಸಲ್ಲಿಸುವ ಅಗತ್ಯವಿದೆ. ಸಂಬಂಧಪಟ್ಟ ಸಮಿತಿಗಳ ಮೂಲಕ ಈ ಅರ್ಜಿಗಳ ಮರುಪರಿಶೀಲನೆ ಮತ್ತು ಮೇಲ್ಮನವಿ ಸಲ್ಲಿಕೆಗೆ ಅಗತ್ಯ ಕ್ರಮ ವಹಿಸಲಾಗುವುದು.

ನಮ್ಮ ಸರ್ಕಾರವು ರೈತರ ಮತ್ತು ಸಂತ್ರಸ್ತರ ಹಿತ ಕಾಯಲು ಸಂಪೂರ್ಣವಾಗಿ ಬದ್ಧವಾಗಿದ್ದು, ಯಡಮನೆ ಗ್ರಾಮದ ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಈ ಮೂಲಕ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *