ಮಹಾನಗರ ಪಾಲಿಕೆ ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ !!
ನಗರದಲ್ಲಿನ ಅವೈಜ್ಞಾನಿಕ ಸ್ಪೀಡ್ ಹಂಪ್ ಮತ್ತು ಅನುಮತಿ ಇಲ್ಲದೆ ಅಳವಡಿಸುತ್ತಿರುವ ಫ್ಲೆಕ್ಸ್ ಗಳ ತೆರವಿಗೆ ಶೀಘ್ರ ಕ್ರಮಕ್ಕೆ ಅಗ್ರಹ.
ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ರಸ್ತೆಗಳಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸ್ಪೀಡ್ ಹಂಪ್‌ಗಳು (Speed humps) ರಸ್ತೆ ನಿಯಮದ ಯಾವುದೇ ಮಾನದಂಡಗಳಿಗೆ ಒಳಪಡದೆ ನಿರ್ಮಾಣವಾಗಿರುತ್ತವೆ. ಈ ಹಂಪ್‌ಗಳ ಮೇಲೆ ಬಿಳಿ ಬಣ್ಣದ ರೇಡಿಯಮ್ ಪಟ್ಟಿ ಅಥವಾ ಲೈಟ್ ರಿಫ್ಲೆಕ್ಟರ್‌ಗಳನ್ನು ಅಳವಡಿಸದೇ ಇರುವುದರಿಂದ, ರಾತ್ರಿ ಸಮಯದಲ್ಲಿ ಅವುಗಳು ಗೋಚರವಾಗದೆ ಕಾರು ಮತ್ತು ಬೈಕುಗಳು ನಿರಂತರವಾಗಿ ಅಪಘಾತಗಳಿಗೆ ಒಳಗಾಗುತ್ತಿದ್ದು ಸಾವು – ನೋವುಗಳು ಸಂಭವಿಸುತ್ತಿದ್ದರೂ ಮಹಾನಗರ ಪಾಲಿಕೆ ಗಂಭೀರ ನಿರ್ಲಕ್ಷ್ಯ ತೋರುತ್ತಿದೆ.
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಅನೇಕ ದೂರುಗಳನ್ನು ಸಲ್ಲಿಸಿ, ಆಯುಕ್ತರನ್ನು ಖುದ್ದಾಗಿ ಸಂಪರ್ಕಿಸಿ ತಕ್ಷಣವೇ ಅವೈಜ್ಞಾನಿಕವಾಗಿ ನಿರ್ಮಾಣವಾದ ಹಂಪ್ ಗಳನ್ನು ಸರಿಪಡಿಸಿ ಬಿಳಿ ಬಣ್ಣದ ಮಾರ್ಕಿಂಗ್ ಅಥವಾ ಲೈಟ್ ರಿಫ್ಲೆಕ್ಟರ್‌ಗಳನ್ನು ಅಳವಡಿಸಲು ಮನವಿ ಮಾಡಿದ್ದರೂ ಯಾವುದೇ ಕ್ರಮ ಜರುಗಿರುವುದಿಲ್ಲ.
ಈ ಬಗ್ಗೆ ಸಮರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಯಾವುದೇ ಅಪಘಾತ, ಸಾವು–ನೋವುಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ಸಂಪೂರ್ಣ ಹೊಣೆಗಾರರಾಗಬೇಕಾಗುತ್ತದೆ ಎಂದು ಈ ಮೂಲಕ ಮತ್ತೊಮ್ಮೆ ಎಚ್ಚರಿಸುತ್ತೇವೆ.
ಫ್ಲೆಕ್ಸ್ ಹಾವಳಿ…
ಹಬ್ಬ ಹರಿದಿನಗಳು, ಜಾತ್ರೆಗಳು, ಜನುಮದಿನ, ಶಿವಮೊಗ್ಗಕ್ಕೆ ರಾಜಕೀಯ ಮುಖಂಡರು ಆಗಮಿಸುವ ಸಂದರ್ಭಗಳಲ್ಲಿ ನಗರದ ಪ್ರಮುಖ ಸರ್ಕಲ್ ಗಳಲ್ಲಿ ಮತ್ತು ರಸ್ತೆ ವಿಭಜಕಗಳ ಮಧ್ಯೆ ಎಗ್ಗಿಲ್ಲದೆ ಅಳವಡಿಸುತ್ತಿರುವ ಫ್ಲೆಕ್ಸ್ ಗಳ ನಿಯಂತ್ರಣ ಸಾಧ್ಯವೇ ಇಲ್ಲವೇ ?
ಮಹಾನಗರ ಪಾಲಿಕೆಯಿಂದ ಯಾವುದೇ ಅನುಮತಿ ಇಲ್ಲದೆ ನಿರಂತರವಾಗಿ ನೂರಾರು ಫ್ಲೆಕ್ಸ್ ಗಳನ್ನು ಅಳವಡಿಸುತ್ತಿದ್ದರೂ ಮಹಾನಗರ ಪಾಲಿಕೆ ಮೌನವಾಗಿರುವುದು ಯಾವ ಕಾರಣಕ್ಕಾಗಿ ? ಯಾರ ಒತ್ತಡಕ್ಕಾಗಿ ಎನ್ನುವುದು ಬಹಿರಂಗವಾಗಬೇಕಿದೆ.
ಕಳೆದ ಐದಾರು ವರ್ಷಗಳಿಂದ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಅನಧಿಕೃತ ಫ್ಲೆಕ್ಸ್ ಅಳವಡಿಕೆ ಬಗ್ಗೆ ಅನೇಕ ದೂರುಗಳು ಬಂದಿದ್ದರೂ ಫ್ಲೆಕ್ಸ್ ಅಳವಡಿಕೆಗೆ ಯಾವುದೇ ಕಾನೂನು, ನಿಯಮಗಳ ಪಾಲನೆ ಇಲ್ಲವೇ ಇಲ್ಲ.
ಅಧಿಕಾರಿಗಳೇ ಕಣ್ಣುಮುಚ್ಚಿ ಕುಳಿತುಕೊಳ್ಳಬೇಡಿ, ಇವುಗಳಿಂದಾಗುವ ಅನಾಹುತಕ್ಕೆ ಮತ್ತು ಆರ್ಥಿಕ ನಷ್ಟಕ್ಕೆ ತಾವೇ ನೇರವಾಗಿ ಜವಾಬ್ದಾರರು ಎನ್ನುವುದನ್ನು ಎಚ್ಚರಿಕೆಯ ಮೂಲಕ ಮತ್ತೊಮ್ಮೆ ತಿಳಿಸುತ್ತಿದ್ದೇವೆ.
ಶಿವಮೊಗ್ಗದ ಸಾರ್ವಜನಿಕರು ಹೋರಾಟಕ್ಕೆ ಇಳಿಯುವುದಕ್ಕಿಂತ ಮುಂಚೆಯೇ ತಾವುಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು, ಯಾವುದೇ ರಾಜಕೀಯ ಒತ್ತಡಗಳಿಗೂ ಮಣಿಯದೆ ಕಾನೂನು ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯು ಈ ಮೂಲಕ ಆಗ್ರಹಿಸುತ್ತದೆ.
ಡಾ. ಎ. ಸತೀಶ್ ಕುಮಾರ್ ಶೆಟ್ಟಿ
ಸಂಘಟನಾ ಕಾರ್ಯದರ್ಶಿ
ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ