ಮಂಜುನಾಥ್ ಶೆಟ್ಟಿ…

ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ಯಾವುದೇ ಗ್ರಾಮ ಅಥವಾ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗದಂತೆ ಕ್ರಿಯಾ ಯೋಜನೆ ಸಿದ್ದಪಡಿಸಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


ಬರ ನಿರ್ವಹಣೆ ಕುರಿತು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಸಮಸ್ಯಾತ್ಮಕ ಗ್ರಾಮಗಳನ್ನು ಮುಂಚಿತವಾಗಿಯೇ ಗುರುತಿಸಿ, ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಥವಾ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸನ್ನದ್ಧರಾಗಿರುವಂತೆ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಇಒಗಳಿಗೆ ಸೂಚಿಸಿದರು. ಜೂನ್ ವರೆಗೂ ಬರ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇರುವುದರಿಂದ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದರು.


ಮಳೆ ಅಭಾವ ಮತ್ತು ಜಲಾಶಯಗಳ ಸ್ಥಿತಿ…


ಎಲ್-ನಿನೊ ಪರಿಣಾಮದಿಂದಾಗಿ ಮಾರ್ಚ್‌ನಿಂದ ಮೇ ವರೆಗೆ ಶೇ. 39 ರಷ್ಟು ಮಳೆ ಕೊರತೆಯಾಗಿದ್ದರೆ, ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಶೇ. 52ರಷ್ಟು ಮಳೆ ಕಡಿಮೆಯಾಗಿದೆ. ಒಟ್ಟಾರೆ ಶೇ. 37ರಷ್ಟು ಮಳೆ ಕೊರತೆಯಾಗಿದ್ದು, ತೀವ್ರ ಮಳೆ ಅಭಾವ ಸೃಷ್ಟಿಯಾಗಿದೆ.


ಭದ್ರಾ ಜಲಾಶಯ…

ಪ್ರಸ್ತುತ 54 ಟಿಎಂಸಿ ನೀರಿದ್ದು, ಇದರಲ್ಲಿ 13 ಟಿಎಂಸಿ ಡೆಡ್ ಸ್ಟೋರೇಜ್ ಇದೆ. ಸದ್ಯ 10 ದಿನಕ್ಕೆ 1 ಟಿಎಂಸಿ ನೀರು ಬಿಡಲಾಗುತ್ತಿದೆ.
ತುಂಗಾ ಜಲಾಶಯ: 2.411 ಟಿಎಂಸಿ ನೀರಿನ ಸಂಗ್ರಹವಿದ್ದು, ಮೇ ತಿಂಗಳವರೆಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಿಲ್ಲ. ಲಿಂಗನಮಕ್ಕಿ 73.70 ಟಿಎಂಸಿ‌ ನೀರಿದ್ದು ಮೇವರೆಗೆ ಬಳಸಬಹುದು.


ಕುಡಿಯುವ ನೀರು ಮತ್ತು ಬೋರ್‌ವೆಲ್ ನಿರ್ವಹಣೆ…


ಈಗಾಗಲೇ ಜಿಲ್ಲೆಯ 17 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 20 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ 5-6 ಗ್ರಾಮ ಪಂಚಾಯಿತಿಗಳಲ್ಲಿ ಸಮಸ್ಯೆ ಕಂಡುಬಂದಿದ್ದು, ಸಮಸ್ಯೆ ಇರುವ ಗ್ರಾ.ಪಂ.ಗಳ ಸಂಪೂರ್ಣ ವಿವರ ಪಡೆಯಲು ಸೂಚಿಸಿದರು.


ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯುವಾಗ ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಿ ಪಡೆಯಬೇಕು ಎಂದು ಡಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅಂತರ್ಜಲ ಮಟ್ಟ ಕುಸಿದಿದ್ದು, ಅಕ್ಟೋಬರ್ ಅಂತ್ಯಕ್ಕೆ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟ 10.33 ಮೀಟರ್ (ಬಿಜಿಎಲ್) ದಾಖಲಾಗಿದೆ. ಪ್ರಸ್ತುತ 200 ಅಡಿ ಆಳಕ್ಕೆ ಕುಸಿಯುತ್ತಿರುವ ಅಂತರ್ಜಲ, ಮೇ ವೇಳೆಗೆ 400 ರಿಂದ 500 ಅಡಿಗಿಂತಲೂ ಹೆಚ್ಚು ಆಳಕ್ಕೆ ಇಳಿಯುವ ಸಂಭವವಿದೆ. ಹೀಗಾಗಿ ಮಳೆ ಬರುವಾಗಲೇ ಕೃತಕ ಅಂತರ್ಜಲ ರೀಚಾರ್ಜ್ ಪಿಟ್‌ಗಳನ್ನು ನಿರ್ಮಿಸಿಕೊಂಡರೆ ಅನುಕೂಲವಾಗಲಿದೆ ಎಂದು ಅಧಿಕಾರಿ ತಿಳಿಸಿದರು.


ಕೆರೆಗಳ ನೀರಿನ ಸಂಗ್ರಹ (ನ.14ರ ವರದಿ)…


ಜಿಲ್ಲೆಯಲ್ಲಿರುವ ಒಟ್ಟು 306 (ಸಣ್ಣ ನೀರಾವರಿ ಇಲಾಖೆಯ 206 ಸೇರಿದಂತೆ) ಕೆರೆಗಳ ಪೈಕಿ 74 ಕೆರೆಗಳಲ್ಲಿ ಶೇ. 1 ರಿಂದ 30ರಷ್ಟು (6.290 ಟಿಎಂಸಿ), 49 ಕೆರೆಗಳಲ್ಲಿ ಶೇ. 31 ರಿಂದ 50ರಷ್ಟು (0.289 ಟಿಎಂಸಿ) ಹಾಗೂ 183 (ಸಣ್ಣ ನೀರಾವರಿಯ 160) ಕೆರೆಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಅಂದರೆ ಶೇ. 51 ರಿಂದ 99ರಷ್ಟು (1.51 ಟಿಎಂಸಿ) ನೀರು ಸಂಗ್ರಹವಾಗಿದೆ. ಪೂರ್ಣ ಪ್ರಮಾಣದಲ್ಲಿ ತುಂಬಿದ ಕೆರೆಗಳ ಸಂಖ್ಯೆ ಸದ್ಯ ಶೂನ್ಯವಾಗಿದ್ದು ಕೆರೆ ನೀರಿನ ಸಮರ್ಪಕ ಸದ್ಬಳಕೆ ಆಗಬೇಕೆಂದು ಡಿಸಿ ಸೂಚಿಸಿದರು.


55,208 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ; ಪರಿಹಾರಕ್ಕೆ ಕಾಯುವಿಕೆ…


ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 55,208 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದರಲ್ಲಿ 51,690 ಹೆಕ್ಟೇರ್ ಕೃಷಿ ಬೆಳೆ ಹಾಗೂ 3,518 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಆದರೆ, ಈವರೆಗೆ ಬೆಳೆ ನಷ್ಟದ ಪರಿಹಾರ ಹಾಗೂ ಸಬ್ಸಿಡಿ ರೈತರಿಗೆ ಬಂದಿಲ್ಲ ಎಂದು ತಿಳಿಸಿದರು.


ಬಿತ್ತನೆ ಮತ್ತು ರಸಗೊಬ್ಬರ…

2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 7,905.54 ಕ್ವಿಂಟಾಲ್ ಬಿತ್ತನೆ ಬೀಜದ ಗುರಿ ಹೊಂದಿದ್ದು, ಈವರೆಗೆ 3,331.42 ಕ್ವಿಂಟಾಲ್ ವಿತರಿಸಲಾಗಿದೆ. ಅಕ್ಟೋಬರ್ 31ರ ಅಂತ್ಯಕ್ಕೆ 39,704 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.


ಮೇವು ಲಭ್ಯತೆ…

ಜಿಲ್ಲೆಯಲ್ಲಿ 4,84,298 ದೊಡ್ಡ ಜಾನುವಾರುಗಳು ಹಾಗೂ 86,130 ಸಣ್ಣ ಜಾನುವಾರುಗಳಿವೆ. ಪ್ರಸ್ತುತ 11,35,970 ಟನ್ ಮೇವು ಲಭ್ಯವಿದ್ದು, ಇದು ಮುಂದಿನ 55 ವಾರಗಳಿಗೆ ಸಾಕಾಗುವಷ್ಟಿದೆ.
ವಿಬಿ-ಜಿ ರಾಮ್ ಜಿ ಕಾಮಗಾರಿ: ಬರ ನಿರ್ವಹಣೆ ಕಾಮಗಾರಿಗಳಡಿ ಬೋರ್‌ವೆಲ್ ಪುನಶ್ಚೇತನ ಹಾಗೂ ರೀಚಾರ್ಜ್ ಪಿಟ್ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕು ಎಂದು ಸೂಚನೆ ನೀಡಿದರು.


ಮಳೆ ಮಾಪಕ ಪರಿಶೀಲನೆ:ಗ್ರಾಮ ಪಂಚಾಯಿತಿಗಳಲ್ಲಿರುವ ಟೆಲಿಮೆಟ್ರಿಕ್ ಮಳೆ ಮಾಪಕಗಳು (ಟಿ ಆರ್ ಜಿ) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ನಿರಂತರವಾಗಿ ಪರಿಶೀಲಿಸಿ ಮಾಹಿತಿ ನೀಡಬೇಕು. ಇದಕ್ಕಾಗಿ ವಿಎಒ ಗಳನ್ನು ನೋಡಲ್ ಆಫೀಸರ್‌ಗಳನ್ನಾಗಿ ನೇಮಿಸಲಾಗಿದ್ದು ಒಂದು ತಿಂಗಳೊಳಗೆ ವರದಿ ಪಡೆಯಬೇಕು ಎಂದರು.
ಭೂಕುಸಿತ ಕಾಮಗಾರಿ: ಜಿಲ್ಲೆಯ ಭೂಕುಸಿತ ಪ್ರದೇಶಗಳಿಗೆ ಸಂಬಂಧಿಸಿದಂತೆ 84 ಕಾಮಗಾರಿಗಳು ಮಂಜೂರಾಗಿದ್ದು, ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕಾಮಗಾರಿಗಳನ್ನು ಕೈಗೆತ್ತಿಕೊಂಡಿವೆ. ಇವುಗಳನ್ನು ನಿಗದಿತ ವೇಳೆಯೊಳಗೆ ಪೂರ್ಣಗೊಳಿಸಲು ಡಿಸಿ ಸೂಚಿಸಿದರು.


ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಅಪರ ಜಿಲ್ಲಾಧಿಕಾರಿ ಅಭಿಷೇಕ್, ಸಾಗರ ಉಪವಿಭಾಗಾಧಿಕಾರಿ ಸತ್ಯನಾರಾಯಣ್, ಜಿ.ಪಂ. ಉಪಕಾರ್ಯದರ್ಶಿ ಅನ್ನಪೂರ್ಣ, ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *