ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: 17ನೇ ವಾರ್ಡ್ ಕಾಂಗ್ರೆಸ್ ವತಿಯಿಂದ ಸೂಡಾ ಅಧ್ಯಕ್ಷ ಮಧುಸೂಧನ್ ಮತ್ತಿತರರಿಗೆ ಸನ್ಮಾನ ಹಾಗೂ ಕಾರ್ಯಕರ್ತರ ಸಭೆಯು ಗೋಪಾಲಗೌಡ ಬಡಾವಣೆಯ ಬಾಲಾಜಿ ಕನ್ವೆನ್ಷನ್ ಹಾಲ್‌ನಲ್ಲಿ ಜರುಗಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್, ಪಕ್ಷ ಯುವಕರಿಗೆ ಆದ್ಯತೆ ಕೊಡುತ್ತಿದೆ, ಹುದ್ದೆಗಳನ್ನು ನೀಡುತ್ತಿದೆ. ಯುವಕರ ಸಂಘಟನೆಗಾಗಿ ಭಾರತ್ ಜೋಡೋ ಯೋಜನೆ ಜಾರಿಗೊಳಿಸಲಾಗಿದೆ. ಯುವಕರಿಗೆ ಹುದ್ದೆಗಳನ್ನು ನೀಡುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ನೀಡುತ್ತಿದೆ. ಎಲ್ಲರೂ ಒಟ್ಟಾಗಿ ಪಕ್ಷ ಗಟ್ಟಿಗೊಳಿಸೋಣ, ಬಡವರ ಸೇವೆ ಮಾಡೋಣ, ಅಭಿವೃದ್ಧಿಗೆ ಸಹಕರಿಸೋಣ, ಜನರ ಪ್ರೀತಿ ಗಳಿಸೋಣ, ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡು ಸೇವೆ ಮಾಡಿ ಎಂದು ಕರೆ ನೀಡಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಹಾಗೂ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್, ಪಕ್ಷ ಎಲ್ಲರನ್ನೂ ಗುರುತಿಸುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಪಕ್ಷದ ಸಂಘಟನೆ ಮತ್ತಷ್ಟು ಗಟ್ಟಿಗೊಳ್ಳಬೇಕು. ಸೂಡಾದಿಂದ ಮತ್ತಷ್ಟು ಅಭಿವೃದ್ಧಿ ನಿರೀಕ್ಷೆ ಇದೆ. ಒಟ್ಟಾಗಿ 17ನೇ ವಾರ್ಡ್ನ ಅಭಿವೃದ್ಧಿಗೆ ಶ್ರಮಿಸೋಣ. ಅನುದಾನಗಳನ್ನು ಪಡೆಯೋಣ ಎಂದರು.


40 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣದ ವಿಚಾರದಲ್ಲಿ ವಿರೋಧ ಸರಿಯಲ್ಲ. ಸಾರ್ವಜನಿಕ ಬಳಕೆಗೆ ಆಗಬೇಕಾದ ಕಾಮಗಾರಿಯಲ್ಲಿ ಪಕ್ಷ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳೋಣ. ಒಟ್ಟಾರೆ 17ನೇ ವಾರ್ಡ್ ಅಭಿವೃದ್ಧಿಗೆ ಶ್ರಮಿಸೋಣ ಎಂದು ಅವರು ಕರೆ ನೀಡಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಸೂಡಾ ಅಧ್ಯಕ್ಷ ಸಿ.ಜೆ. ಮಧುಸೂಧನ್, ಹೋರಾಟಗಳಿಂದ ಬೆಳೆದು ಬಂದವನು ನಾನು. ಹುದ್ದೆಗಳಿಗೆ ಆಸೆ ಪಟ್ಟವನಲ್ಲ. ಆದರೆ ಕಾಂಗ್ರೆಸ್ ನಾಯಕರು ನನಗೆ ಹುದ್ದೆ ನೀಡಿದ್ದಾರೆ. ಸೇವೆ ಮಾಡುತ್ತೇನೆ. ಹುದ್ದೆಯನ್ನು ಸೇವೆಗಾಗಿ ಬಳಸಿಕೊಳ್ಳುತ್ತೇನೆ. ಪ್ರೀತಿ ವಿಶ್ವಾಸಗಳೇ ಮುಖ್ಯ ಎಂದರು.


ಭಾರತ್ ಜೋಡೋ ಯುವ ಸಂಘಟನೆಯ ಸಮನ್ವಯ ಅಧಿಕಾರಿ ಗೀತೇಂದ್ರ ಗೌಡ ಹಾಗೂ ಹಿಂದುಳಿದ ವರ್ಗಗಳ ಮಹಿಳಾ ಸಂಘಟನೆಯ ಸಂಚಾಲಕಿ ಕವಿತಾ ರಾಥೋಡ್ ಮಾತನಾಡಿ, ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಯುವಕರಿಗೆ ಜವಾಬ್ದಾರಿ ಕೊಡುತ್ತಿರುವು ಸ್ವಾಗತದ ವಿಷಯ ಎಂದರು.


17ನೇ ವಾರ್ಡ್ ಅಧ್ಯಕ್ಷ ಹಾಗೂ ಕಾರ್ಯಕ್ರಮ ಸಂಯೋಜಕ ಆರ್. ರಾಜಶೇಖರ್ ಮಾತನಾಡಿ, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ತಯಾರು ಮಾಡಿಕೊಳ್ಳೋಣ, ಸಂಘಟನೆ ಗಟ್ಟಿಗೊಳಿಸೋಣ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಪ್ರಮುಖರಾದ ಮಾರ್ಟಿನ್, ಹಾಲಪ್ಪ, ವಿಜಯಕುಮಾರ್, ನಾಜೀಮಾ, ಮಂಜುನಾಥ್ ಬಾಬು, ರೈಲ್ವೆ ಪ್ರಸಾದ್, ರವಿಮಮ ಬೋರೆಗೌಡ, ಜಬಿಉಲ್ಲಾ ಹಮಿದ್ ಸೇರಿದಂತೆ ಹಲವರಿದ್ದರು.
ವಿಜಯ್‌ಕುಮಾರ್ ಪ್ರಾರ್ಥಿಸಿದರು. ಶಿವಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮಧುಸೂದನ್, ಗೀತೇಂದ್ರ ಗೌಡ ಹಾಗೂ ಕವಿತಾ ರಾಥೋಡ್ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *